ಮಡಿಕೇರಿ, ಅ. 4: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜುಗಳ ಭೌತಶಾಸ್ತ್ರ ಅಧ್ಯಾಪಕರ ಸಂಘÀ ಇದರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಖಗೋಳ ವಿಜ್ಞಾನ ಮತ್ತು ಬೆಳಕು ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕಲಿತ ಪಠ್ಯಕ್ರಮದಲ್ಲಿ ಖಗೋಳ ವಿಜ್ಞಾನ ಮತ್ತು ಬೆಳಕು ಕುರಿತು ಸಮಗ್ರ ಮಾಹಿತಿ ಇಲ್ಲದ್ದರಿಂದ ಹಾಗೂ ನೂತನ ಪಠ್ಯಕ್ರಮದಲ್ಲಿ ಈ ವಿಷಯವನ್ನು ಸೇರಿಸಲಾಗಿರುವದರಿಂದ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್, ಜಗತ್ತು ಇವತ್ತು ಜ್ಞಾನಾಧಾರಿತವಾಗಿ ಪ್ರಗತಿ ಹೊಂದುತ್ತಿದ್ದು, ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಖಗೋಳ ವಿಜ್ಞಾನ ಕುರಿತು ಕುತೂಹಲ, ಆಸಕ್ತಿ ಮೂಡಿಸುವ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ, ಮಂಗಳಯಾನ, ಚಂದ್ರಯಾನ ಕೈಗೊಳ್ಳಲು ಖಗೋಳ ವಿಜ್ಞಾನದಲ್ಲಿ ನಮ್ಮ ದೇಶ ಹೊಂದಿರುವ ಪರಿಣತಿಯೇ ಕಾರಣವಾಗಿದ್ದು, ಈ ರೀತಿಯ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಜಗನ್ನಾಥ, ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ. ವಿಜಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಾನವಿ ಎ.ಎಸ್ ಅವರು ನಿರೂಪಿಸಿದರು. ಜಿಲ್ಲೆಯ ವಿವಿಧ ಪ್ರೌಢ ಶಾಲಾ ಶಿಕ್ಷಕರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕ ಅಧ್ಯಾಪಕೇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.