ಮಡಿಕೇರಿ, ಅ. 4: ಕರ್ನಾಟಕ ಜಾನಪದ ಪರಿಷತ್ನ ಕೊಡಗು ಜಿಲ್ಲಾ ಘಟಕದ ವತಿಯಿಂದ ದಸರಾ ಸಮಿತಿಯ ಸಹಯೋಗದೊಂದಿಗೆ ಗಾಂಧಿ ಮೈದಾನದ ದಸರಾ ವೇದಿಕೆಯಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ-ಕಲಾ ಸಂಭ್ರಮವು ರಾಜ್ಯದ ವಿವಿಧೆಡೆಯ ಕಲಾಪ್ರಾಕಾರಗಳ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಗೋಂದಲಿ ಜನಪದ ಗೀತೆ ಪ್ರಾಕಾರವನ್ನು ತಿಪ್ಪಣ ಅಂಬಾನಿ ಸುಗತೇಕರ ಮತ್ತು ತಂಡ ಪ್ರಸ್ತುತಪಡಿಸುವ ಮೂಲಕ ಅಳಿವಿನಂಚಿನಲ್ಲಿರುವ ಕಲೆಯನ್ನು ಜೀವಂತ ಇಟ್ಟುಕೊಂಡಿರುವದನ್ನು ದೃಢಪಡಿಸಿದರು.
ತುಳು ನಾಡಿನ ಸುಗ್ಗಿ ಹಬ್ಬ ಸಂಭ್ರಮದ ಪ್ರತೀಕವಾಗಿರುವ ಕಂಗೀಲು ನೃತ್ಯವನ್ನು ಸಂಪಾಜೆ ದಬ್ಬಡ್ಕದ ನೇತಾಜಿ ಯುವ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಪ್ರದರ್ಶಿಸಿದರು.
ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ಶಾಲೆಯ ವಿದ್ಯಾರ್ಥಿಗಳು ಸುಗ್ಗಿ ನೃತ್ಯ, ತ್ಯಾಗರಾಜಕಾಲೋನಿಯ ಹ್ಯಾರೀಸ್ ತರಬೇತಿಯ ಧಪ್ ನೃತ್ಯ, ‘ಬೇಟೆಯಾಡುವದು ಬೇಡ’ ಎಂಬ ತಾತ್ಪರ್ಯವನ್ನು ಹೊಂದಿರುವ ಜಾನಪದ ಶೈಲಿಯ ಕೊಡವ ಹಾಡಿಗೆ ಕಡಗದಾಳು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಜ್ಜೆಹಾಕಿ ಜಾನಪದ ಮನಸ್ಸುಗಳನ್ನು ರಂಜಿಸಿದರು.
ಮಿಲನ ಭರತ್ ನೇತೃತ್ವದ ತಂಡದಿಂದ ಅರೆಭಾಷೆ ಸಂಸ್ಕøತಿಯನ್ನು ಬಿಂಬಿಸುವ ನೃತ್ಯ, ಲಿಟಲ್ಫ್ಲವರ್ ಶಾಲಾ ಶಿಕ್ಷಕರ ತಂಡದಿಂದ ಜಾನಪದ ಗೀತೆ ಗಾಯನ ನಡೆಯಿತು. ಪುತ್ತೂರು ಕೊಂಬೆಟ್ಟಿನ ಮರಾಟೆ ಯುವ ವೇದಿಕೆಯ ತಂಡದಿಂದ ಮೂಡಿಬಂದ ಕರಂಗೋಲು ನೃತ್ಯ ತುಳುನಾಡಿನ ಜಾನಪದ ಕಲಾಪ್ರಾಕಾರವನ್ನು ಬಿಂಬಿಸಿತು.
ಮಡಿಕೇರಿಯ ಕೊಡವ ಸಮಾಜದಿಂದ ಬೊಳಕಾಟ್, ಭಾಗಮಂಡಲದ ಜ್ಞಾನೋದಯ ಶಾಲೆಯ ವಿದ್ಯಾರ್ಥಿಗಳಿಂದ ಮೂಡಿಬಂದ ಸೋಲಿಗರ ನೃತ್ಯ ಗಮನ ಸೆಳೆಯಿತು. ನಾಗರಹೊಳೆಯ ಆದಿವಾಸಿ ಯುವಕ-ಯುವತಿಯರು ಪ್ರಸ್ತುತಪಡಿಸಿದ ಅಮ್ಮಾಳೆ ಅಮ್ಮ ನೃತ್ಯ ಆಕರ್ಷಕವಾಗಿತ್ತಲ್ಲದೇ, ಆದಿವಾಸಿಗಳ ವಿಭಿನ್ನ ಕಲಾಪ್ರಾಕಾರವನ್ನು ಹೊರಜಗತ್ತಿಗೆ ಪರಿಚಯಿಸಿತು.
ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಬಿತ್ತುವವನ ಸಾಮತಿ’ ಎಂಬ ನೃತ್ಯದಲ್ಲಿ ಅನ್ನ ಬೆಳೆಯುವ ರೈತನ ಜೀವನ ಕ್ರಮವನ್ನು ಬಿಂಬಿಸಿದರು. ವೀರಾಜಪೇಟೆಯ ತೋರ ಗ್ರಾಮದ ಕುಡಿಯರ ಶಾರದ ಮತ್ತು ತಂಡದಿಂದ ಉರುಟ್ಟಿಕೊಟ್ಟ್ ಆಟ್ ಪ್ರದರ್ಶನ ನಡೆಯಿತು. ಶಾಂತಳ್ಳಿಯ ಜಾನಪದ ಗಾಯಕ ಗಣೇಶ್ ಅವರಿಂದ ಜಾನಪದ ಗೀತೆ ಗಾಯನ, ಜೇನುಕುರುಬರ ಮರಿ ಮತ್ತು ದಾಸಿ ಅವರಿಂದ ಮೂಡಿಬಂದ ಸೋರೆ ಬುರುಡೆ ಗಾಯನ ಕೇಳುಗರ ಮನಮುಟ್ಟಿತು.
ಮೋಹನ್, ಟಾಮಿ ಜೋಸೆಫ್ ಮತ್ತು ತಂಡದವರು ಶಿವನನ್ನು ಗಾಯನದ ಮೂಲಕ ಸ್ತುತಿಸುತ್ತಿದ್ದಂತೆ ಜಿಲ್ಲೆಯ ಚಿತ್ರಕಲಾವಿದ ಬಿ.ಆರ್. ಸತೀಶ್ ಅವರು ತಮ್ಮ ಕುಂಚದಲ್ಲಿ ಶಿವನನ್ನು ಚಿತ್ರಿಸುವ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿದರು. ಗೋಣಿಕೊಪ್ಪದ ಡಾ. ಆಶಿಕ್ ಅವರು ತಮ್ಮ ಗಂಟಲಿನಿಂದ ವಾದ್ಯ ನುಡಿಸುವ ಮೂಲಕ ಗಮನ ಸೆಳೆದರು.
ಭಾಗಮಂಡಲದ ಅಭಿನಯ ಕಲಾ ಮಿಲನ ಟ್ರಸ್ಟ್ನ ವಿದ್ಯಾರ್ಥಿಗಳಿಂದ ಆದಿವಾಸಿ ನೃತ್ಯ, ಮಡಿಕೇರಿಯ ಸೂರ್ತಿ ಮೇಳ ತಂಡದಿಂದ ಜಾನಪದ ಗೀತ ಗಾಯನ, ನಾಟ್ಯಗಣಪತಿ ತಂಡದಿಂದ ನೃತ್ಯ ಪ್ರದರ್ಶನ, ರಾಣಿಮಾಚಯ್ಯ ನೇತೃತ್ವದ ತಂಡದಿಂದ ಉಮ್ಮತ್ತಾಟ್, ಪಾಂಡವಪುರದ ಶಿವಮಾದಯ್ಯ ಹೆಬ್ಬಾಳಮ್ಮ ಕಲಾ ತಂಡದಿಂದ ಪೂಜಾ ಕುಣಿತ, ಸೋಮವಾರಪೇಟೆಯ ಪ್ರಗತಿಪರ ಮಹಿಳಾ ವೇದಿಕೆಯಿಂದ ಗೌಡ ಸಾಂಪ್ರದಾಯಿಕ ಸುಗ್ಗಿ ಕುಣಿತ, ರಾಮನಗರದ ಚಿಕ್ಕನರಸಯ್ಯ ಮತ್ತು ತಂಡದಿಂದ ಮೂಡಿಬಂದ ಪಟದ ಕುಣಿತಗಳು ಜನಮನ ಗೆದ್ದವು. ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಪರಿಷತ್ನ ಪದಾಧಿಕಾರಿಗಳಾದ ಜಯಲಕ್ಷ್ಮೀ, ಹೆಚ್.ಟಿ. ಅನಿಲ್ ಮತ್ತು ಎಂ.ಎ. ರುಬೀನ ಅವರುಗಳು ನಿರ್ವಹಿಸಿದರು.