ಮಡಿಕೇರಿ, ಅ. 4: ಅಮ್ಮನ ಮೇಲಿನ ಅವ್ಯಕ್ತ ಪ್ರೀತಿ..., ಮತ್ತೆ ಅಮ್ಮನ ಮಡಿಲಲ್ಲಿ ಮಗುವಾಗ ಬೇಕೆಂಬ ಆಸೆ..., ಕೊಡಗಿನ ಪ್ರಕೃತಿಯ ಮೇಲಿನ ಪ್ರೀತಿ..., ಪರಿಸರಕ್ಕೆ ಆದ ಹಾನಿ..., ವಿಕೋಪ ದಲ್ಲಿ ನೊಂದವರ ಬಗ್ಗೆ ಮರುಕ..., ನುಡಿನಮನದ ಸಾಂತ್ವನ..., ಮಡಿಕೇರಿ ದಸರಾದ ವೈಭವ.... ಇವು ಕವಿಮನದಾಳದಿಂದ ಹೊರ ಬಂದ ಭಾವನೆಗಳು. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಯಲ್ಲಿ ಭಾಗವಹಿಸಿದ್ದ ಕವಿ ಮನಸು ಗಳು ತಮ್ಮ ಭಾವನೆಗಳಿಗೆ ಅಕ್ಷರದ ರೂಪ ನೀಡಿ ತಮ್ಮ ಮಾತೃಭಾಷೆ ಯಲ್ಲಿ ವ್ಯಕ್ತಪಡಿಸಿದ ಪರಿ ನೆರೆದಿದ್ದ ಸಾಹಿತ್ಯಾಸಕ್ತರು ಕವಿಹೃದಯಗಳನ್ನು ಸೂರೆಗೊಂಡವು.ಮಡಿಕೇರಿ ನಗರ ದಸರಾ ಸಮಿತಿ, ದಸರಾ ಬಹುಭಾಷಾ ಕವಿ ಗೋಷ್ಠಿ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿಯಲ್ಲಿ 57 ಮಂದಿ ಕವಿಗಳು ತಮ್ಮ ಮಾತೃಭಾಷೆಗಳಲ್ಲಿ ಕವನ ವಾಚನ ಮಾಡುವದರೊಂದಿಗೆ ಕವಿಗೋಷ್ಠಿಯನ್ನು ಯಶಸ್ವಿ ಗೊಳಿಸಿದರು.ಪ್ರಕೃತಿ, ದೇಶ, ಭಾಷೆ, ಆಧುನಿಕ ಜಗತ್ತು, ದಸರಾ ಆಚರಣೆ, ಮಳೆ, ಕೊಡಗು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಕವಿಗಳು ಸಮಾಜದ ಕಿವಿಗಳಿಗೆ ಸಂದೇಶ ಸಾರಿದರು.

ಬೆಂಗಳೂರಿನ ಗಿರಿಜಾ, ಪ್ರಕೃತಿಯ ಮೇಲೆ ಪ್ರಹಾರ ಮಾಡದಿರಿ ಎಂದು ತಮ್ಮ ‘ರಕ್ಕಸರಾಗದಿರಿ’ ಕವನದಲ್ಲಿ ಹೇಳಿದರೆ, ಯಾಲದಾಳು ಕುಮುದಾ ಮತ್ತೊಮ್ಮೆ ಅಮ್ಮನ ಮಡಿಲಲ್ಲಿ ಮಗುವಾಗುವ ಆಸೆಯನ್ನು ‘ಮಗುವಾಗಿಸೆನ್ನ’ ಎಂಬ ಕವನದಲ್ಲಿ ಅಭಿಲಾಷೆ ವ್ಯಕ್ತಪಡಿಸಿದರು. ವತ್ಸಲಾ ಶ್ರೀಶಾ ಅವರು ‘ಹೋಗಿ ಬರುವೆನು ದೇಶರಕ್ಷಣೆಗೆ’ ಕವನದಲ್ಲಿ ವೀರ ಯೋಧನ ಮನದಾಳವನ್ನು ತೆರೆದಿಟ್ಟರು. ಕೃಪಾ ದೇವರಾಜ್ ಹೆಣ್ಣಿನ ಸಹನೆ ಬಗ್ಗೆ ‘ಪ್ರಶ್ನಾಂತರ’ದಲ್ಲಿ ಪ್ರಶ್ನಿಸಿದರು.

ಪ್ರಕೃತಿ ದೇವಿಯನ್ನು ಸಾಕು ತಾಯಿಗೆ ಹೋಲಿಸಿ ಕುಶಾಲನಗರದ ಕುಕ್ಕುನೂರು ರೇಷ್ಮಾ ಮನೋಜ್ ಪ್ರಾಕೃತಿಕ ವಿಕೋಪದ ಬಗ್ಗೆ ಕವನ ವಾಚಿಸಿದರು. (ಮೊದಲ ಪುಟದಿಂದ) ಬಡಕಡ ರಜಿತ ಕಾರ್ಯಪ್ಪ ಮಹಾಮಳೆಯ ಆರ್ಭಟ, ನೋವಿನ ಕಾರ್ಮೋಡದ ಬಗ್ಗೆ ‘ಬೇಗುದಿ’ ಎಂಬ ಕವನ ವಾಚಿಸಿ ಮಳೆ ತಂದ ಅವಾಂತರದ ಬಗ್ಗೆ ಬೆಳಕು ಚೆಲ್ಲಿದರು. ಹೊದ್ದೂರು ಮಂಜು ಗೋಪಿನಾಥನ್ ಗುಡ್ಡ ಕರಗಿ ನೀರಾಗೀ ನೆಲ, ಮಳೆ ತಣ್ಣೀರಲ್ಲ ಹೊಳೆ ಕಣ್ಣೀರು ಎಂಬ ಪದಗಳ ಮೂಲಕ ಕೊಚ್ಚಿದ ಬದುಕಿನ ಬಗ್ಗೆ ಮಳೆ ಎಂಬ ಕವನದ ಮೂಲಕ ಬಿಂಬಿಸಿದರು. ಜಾಲ್ಸೂರುವಿನ ಕಾಳಮನೆ ರಶ್ಮಿ ಚಂದ್ರ ಪ್ರಕೃತಿ ಎಂಬ ಕವನದಲ್ಲಿ ಕೋಪಿತ ವರುಣನ ಬಗ್ಗೆ ತಿಳಿಸಿದರು. ಮರಗೋಡುವಿನ ಹರಿಣಿ ಜಲವ್ಯೂಹ ಕವನದ ಮೂಲಕ ರೈತನ ಕಣ್ಣೀರು, ಬೀದಿಗೆ ಬಿದ್ದ ನಿರಾಶ್ರಿತರ ಗೋಳು, ಮಕ್ಕಳನ್ನು ಕಾಪಾಡಿ ಕೊಳ್ಳಲು ತಾಯಿಯ ಹಂಬಲದ ಸಾಲುಗಳು ಅನಾವರಣಗೊಳಿಸಿದರು. ನೆರೆಯಿಂದ ಕಂಗಾಲಾದ ಜನತೆ ಗೋಳಿಗೆ ಗಟ್ಟಿಚರ್ಮದ ರಾಜಕಾರಣಿಗಳು ಸ್ಪಂದಿಸುತ್ತಿಲ್ಲ, ಪರಿಹಾರ ಕೂಡ ದೊರೆತ್ತಿಲ್ಲ, ಕಾರ್ಮಿಕರ ಸಾಲದ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬ ಸಾಲುಗಳ ಮೂಲಕ ಸೋಮವಾರಪೇಟೆಯ ರುಬಿನಾ ‘ಸಂತ್ರಸ್ತರ ಗೋಳು ಕೇಳುವವರ್ಯಾರು’ ಎಂಬ ಕವನವನ್ನು ವಾಚಿಸಿ ಸೂಕ್ತ ಪರಿಹಾರ ನೀಡುವಂತೆ ಕವನದ ಮೂಲಕ ಆಡಳಿತಕ್ಕೆ ಒತ್ತಾಯಿಸಿದರು. ಉಳಿದಂತೆ ವೀಣಾ ರಾವ್ ವಾಚಿಸಿದ ಮಂಜಿನ ಕಾವಲು, ಅಲ್ಲಾರಂಡ ವಿಠಲ ನಂಜಪ್ಪ ಬರೆದ ತಲೆ ಎಳ್ತ್ ಬೋಂಡು, ಚೈತ್ರಾ ಬೆಳ್ಳರಿಮಾಡು ಅವರ ಕೊಡಗ್, ಸಾವಿತ್ರಿ ಹೆಚ್.ಜಿ ಎನ್ನ ಕೊಡಗು, ಪಿ.ಯು ಸುಂದರ ಅವರ ಅಪ್ಪೆನ ಸುಗಿಪು, ಬೆಟ್ಟಗೇರಿಯ ಸುನಿತಾ ವಿಶ್ವನಾಥ್ ಮನಸ್ಸ್ ಕರ್‍ಗ್‍ತ್ ಕವನಗಳು ಉತ್ತಮ ಸಂದೇಶ ನೀಡಿದವು.

ಬಹುಭಾಷೆ ಅನಾವರಣ : ಕವಿಗೋಷ್ಠಿಯಲ್ಲಿ ಸುಮಾರು 57 ಕವನಗಳು ವಾಚನಗೊಂಡವು. ಕನ್ನಡ, ಕೊಡವ, ಅರೆಬಾಷೆ, ತುಳು, ಮರಾಠಿ, ತೆಲುಗು, ಬ್ಯಾರಿ, ಹಿಂದಿ, ಕುಂಬಾರ, ಹವ್ಯಕ ಭಾಷೆಗಳಲ್ಲಿ ಕವನಗಳನ್ನು ಕವಿ, ಕವಯತ್ರಿಯರು ವಾಚನ ಮಾಡಿದರು.

ಕನ್ನಡ ಭಾಷೆಯಲ್ಲಿ ಸೋಮವಾರಪೇಟೆಯ ನಾ.ಲಾ. ವಿಜಯ ದೇವರುಗಳೆಲ್ಲಾ ಗುಡಿಯೊಳಗೆ ಕುಳಿತು ಬಾಗಿಲು ಹಾಕಿಕೊಂಡಿದ್ದಾರೆ, ರಾಣಿ ರವೀಂದ್ರ ಆಗಲಿಲ್ಲವೇಕೆ ನಾ ಅ ಚುಕ್ಕೆ, ವಸಂತಿ ಭೂತಾಯಿ ಸಂತಾನ, ಕುಶಾಲನಗರದ ಮಾಲಮೂರ್ತಿ ನಿಸ್ವಾರ್ಥ ನೇಸರ, ಕಿಗ್ಗಾಲು ಹರೀಶ್ ಭಗವಂತನ ಹೆಸರು, ವಿನಯ್ ಕುಮಾರ್ ಆಶಯ, ತಾವೂರು ಕಿಶೋರ್ ಮಲ್ಲೆಯ ಮಾತು, ಗೋಣಿಕೊಪ್ಪದ ವಿ.ಟಿ ಶ್ರೀನಿವಾಸ್ ದಸರಾ, ಬೊಳ್ಳೇರ ಸುಮನ್ ತಮ್ಮಯ್ಯ ಜೀವಜಲ, ಶನಿವಾರಸಂತೆಯ ಸುಜಲಾದೇವಿ ನನ್ನ ಕವಿತೆ, ಕಡ್ಯದ ಸುಚಿತಾ ನಮ್ಮ ಭಾರತ, ಕರಿಕೆಯ ಭರಮಪ್ಪ ಪಾಶಗಾರ ನಸುಕಿನ ಮಂಜು, ಕಲ್ಲುಮುಟ್ಲು ಜಶ್ಮಿ ದೇಶ ರಕ್ಷಕ್, ಎ.ವಿ. ಮಂಜುನಾಥ್ ಚುಟುಕುಗಳನ್ನು ವಾಚಿಸಿದರೆ, ಸುವರ್ಣ ವಿ.ಎ. ವರದಿಗಾರ ಪ್ರಜ್ವಲ್ ನನ್ನದೀದಿ, ಕವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಕೊಡವ ಭಾಷೆಯಲ್ಲಿ ಬೊಟ್ಟೋಳಂಡ ನಿವ್ಯ ದೇವಯ್ಯ ನಂಗಡ ಕೊಡಗದ್, ಅಪ್ಪಚಂಡ ಜಶಿಕಾ ಕಾವೇರಪ್ಪ ಕೊಡಗ್‍ರ ಚಾಯೊಬೋಜ, ಕೂಪದಿರ ಸುಂದರಿ ಮಾಚಯ್ಯ ಕೇಳಿ ನಾಡ ಆತ್ಮಕಥೆರ ಬೇರತ್‍ನ, ಎಂ.ಎಂ ಪ್ರೀತು ಮಡಿಕೇರಿ ದಸರಾದ ಬಗ್ಗೆ ತಿಳಿಹೇಳಿದರು.

ಅರೆಭಾಷೆಯಲ್ಲಿ ಕೊಟ್ಟಕೇರಿಯನ ಲೀಲಾ ದಯಾನಂದ, ನನ್ನವ್ವ ಭಾರತಿ. ವಿನೋದ್ ಮೂಡಗದ್ದೆ ಬೊದ್ಕ್ ಅಂದ್ ಇಂದ್, ಕಟ್ರತನ ಬೆಳ್ಯಪ್ಪ ಅರೆಭಾಷೆಗೆ ಹೋರಾಡ್, ದೀಪಿಕಾ ಸುದರ್ಶನ್ ಹಳ್ಳಿ ಸೊಗಡ್, ಕಣಜಾಲ್ ಪೂವಯ್ಯ ದಂಡ್‍ಲಿರ್ವ ನಮ್ಮ ಹೈದಂಗೊಂದು ಹಾರೈಕೆ, ತೇಜೇಶ್ವರ್ ಕುಂದಲ್ಪಾಡಿ ವಿಪರ್ಯಾಸ ಎಂಬ ಕವನಗಳನ್ನು ವಾಚಿಸಿದರು.

ತುಳು ಭಾಷೆಯಲ್ಲಿ ಪುಟ್ಟಣ್ಣ ಆಚಾರ್ಯ ಆಧುನಿಕ ಜಗತ್ತ್ ಮಾನ್ಯೆರೆಗ್ ಅಪ್ಪತ್ತ್, ಸೌಮ್ಯ ಶೆಟ್ಟಿ ತೆರಿಯೋನ್ಗ ಜೀವನದ ಸಾರ, ಸತೀಶ್ ಸೋಮಪ್ಪ ತೆಲಿಕೆ ಪೋಂಡ್ ಕವನಗಳನ್ನು ವಾಚಿಸಿದರು.

ಸಬಲಂ ಬೋಜಣ್ಣ ರೆಡ್ಡಿ ತೆಲುಗು ಭಾಷೆಯ ಅಕಾಲ ಧರ್ಮಂ, ಭಾಗೀರಥಿ ಹುಲಿತಾಳ ಹವ್ಯಕ ಭಾಷೆಯ ಈ ಕಾಲ, ಹೆಚ್ ಭೀಮರಾವ್ ವಾಷ್ಟರ್ ಮರಾಠಿ ಭಾಷೆಯ ಮೊಬೈಲ್ಲ್‍ಲಾ ಉಸ್ತುಲಾವಿ, ಬ್ಯಾರಿ ಭಾಷೆಯಲ್ಲಿ ಅಬ್ದುಲ್ಲಾ ಮಹಾನ್ ಕಾವಲ್‍ಗಾರ ಪಿನ್ನೆ ಪೂ ಮೋಲು ಎಂಬ ಕವನಗಳ ಮೂಲಕ ಸಮಸ್ಯೆ, ವೇದನೆಗಳ ಬಗ್ಗೆ ಬೆಳಕು ಚೆಲ್ಲಿದರು.