ಮಡಿಕೇರಿ, ಅ. 2: ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 10.47 ಲಕ್ಷ ನಿವ್ವಳ ಲಾಭ ಗಳಿಸಿರುವದಾಗಿ ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ತಿಳಿಸಿದ್ದಾರೆ.
ಸಂಘದ 38ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಸಂಘವು 1927 ಸದಸ್ಯರುಗಳನ್ನು ಹೊಂದಿದ್ದು, ಸದಸ್ಯರಿಂದ ಒಟ್ಟು ರೂ. 54,87,000 ಪಾಲು ಬಂಡವಾಳವನ್ನು ಹಾಗೂ ಠೇವಣಿಯಾಗಿ ರೂ. 4,27,26,450 ಹೊಂದಿದೆ ಎಂದರು.
ಸಂಘದ ಸದಸ್ಯರುಗಳಿಗೆ ಪ್ರಸಕ್ತ ಸಾಲಿನಲ್ಲಿ ರೂ. 6,90,33,535 ಸಾಲವನ್ನು ನೀಡಿದ್ದು, ಶೇ. 100 ರಷ್ಟು ವಸೂಲಾತಿಯಾಗಿದೆ. ಮುಂದಿನ ಸಾಲಿನಲ್ಲಿ ಸದಸ್ಯರಿಗೆ 5 ವರ್ಷದವರೆಗಿನ ಮಧ್ಯಮಾವಧಿ ಸಾಲವನ್ನು, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ 5 ಲಕ್ಷದವರೆಗೆ ಸಾಲವನ್ನು ನೀಡಲು ತೀರ್ಮಾನಿಸಲಾಗಿದೆಯೆಂದು ಮಾಹಿತಿ ನೀಡಿದರು.
ಸಂಘದ ಸದಸ್ಯರುಗಳಿಗೆ ಆಭರಣ ಈಡಿನ ಸಾಲ ರೂ. 1,50,24,000, ಸ್ವಸಹಾಯ ಗುಂಪಿಗೆ ರೂ. 3,22,000 ಸಾಲ ನೀಡಲಾಗಿದೆ. ಜಾಮೀನು ಸಾಲವಾಗಿ ರೂ. 1,01,50,000 ನೀಡಲಾಗಿದ್ದು, ಸಂಘದಲ್ಲಿ ಸದಸ್ಯರಿಂದ ಇದುವರೆಗೂ ರೂ. 11,33,304 ಮರಣನಿಧಿ ಪಾವತಿಯಾಗಿದ್ದು, ಸಾವನ್ನಪ್ಪಿದ ಸದಸ್ಯರುಗಳ ಕುಟುಂಬಕ್ಕೆ ತಲಾ ರೂ. 5,000 ಮರಣ ನಿಧಿಯನ್ನು ನೀಡಲಾಗುತ್ತಿದೆಯೆಂದರು.
ಸಂಘದಿಂದ ರೈತ ಸದಸ್ಯರುಗಳಿಗೆ ಸಕಾಲದಲ್ಲಿ ರಸ ಗೊಬ್ಬರವನ್ನು ವಿತರಿಸಲಾಗುತ್ತಿದೆ. ಸಂಘದ ವತಿಯಿಂದ ಕಳೆದ ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆಯೆಂದು ತಿಳಿಸಿದರು.
ಸರ್ಕಾರದ ಸಾಲಮನ್ನಾ ಯೋಜನೆಯಡಿ ಸಂಘದ 240 ಸದಸ್ಯರು ಅರ್ಜಿಯನ್ನು ಸಲ್ಲಿಸಿದ್ದು, ವಿವರಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸಂಜಯ್ ಪೂಣಚ್ಚ ತಿಳಿಸಿದರು.
ವೇದಿಕೆಯಲ್ಲಿ ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕಿ ತರುನಂ ನಾಸ್, ಸಂಘದ ಉಪಾಧ್ಯಕ್ಷ ಚೌರೀರ ಅಯ್ಯಣ್ಣ, ನಿರ್ದೇಶಕರಾದ ವಾಂಚೀರ ರನ್ನ ಅಜಯ್, ನೆರವಂಡ ಅನುಪ್ ಉತ್ತಯ್ಯ, ಚೌರೀರ ಪ್ರಕಾಶ್ ಪಳಂಗಪ್ಪ, ಐರೀರ ಜಾಬು ಪೂಣಚ್ಚ, ಮೇಕಂಡ ಪಾಪು ಸುಬ್ರಮಣಿ, ಕರ್ಣಯನ ಜೆ. ರಾಧಾಕೃಷ್ಣ, ಬಿ. ಪ್ರಭಾಕರ್, ಚೆಟ್ಟಿಮಾಡ ಹೇಮಮಾಲಿನಿ, ಅಚ್ಚಪ್ಪಂಡ ಎಲ್. ಭವಾನಿ, ಹೆಚ್.ಎ. ಹರೀಶ್ ಕುಮಾರ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ. ಸೋಮಣ್ಣ ಉಪಸ್ಥಿತರಿದ್ದರು.