ಶನಿವಾರಸಂತೆ, ಅ. 2: ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪೂಜಾ ಕೈಂಕರ್ಯ ಹಾಗೂ ವಿಶೇಷ ಸೇವೆಗೆ ನವದುರ್ಗಾ ಮಾತೆಗೆ ಅಖಂಡ ದೀಪಸ್ಥಾಪನೆ, ಘಟಸ್ಥಾಪನೆ ಮೂಲಕ ಚಾಲನೆ ನೀಡಲಾಯಿತು. ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಕಲ್ಫೋಕ್ತ ಪೂಜೆ ನೆರವೇರಿತು.
ದೇವಿಗೆ ಮಹಾಕಾಳಿ ಅಲಂಕಾರದಲ್ಲಿ ಮಂಗಳ ದ್ರವ್ಯಾಭಿಷೇಕ, ಕಲಶಾಭಿಷೇಕ ಮಾಡಿ ಪೂಜಿಸಲಾಯಿತು. ಶ್ರೀ ದುರ್ಗಾ ಕಲ್ಫೋಕ್ತ ಪೂಜೆ, ಲಲಿತಾ ಸಹಸ್ರನಾಮ, ಚಂಡಿಕಾ ಪಾರಾಯಣ, ಮಹಾಮಂಗಳಾರತಿ ನೆರವೇರಿತು. ಅರ್ಚಕ ಮಹಾಬಲೇಶ್ ಜೋಷಿ ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯಕ್ರಮಗಳಲ್ಲಿ ಕೊಡ್ಲಿಪೇಟೆ, ಶನಿವಾರಸಂತೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ಚೌಡೇಶ್ವರಿ ಮಹಿಳಾ ಬಳಗ ಹಾಗೂ ದೇವಾಂಗ ಸಮುದಾಯದವರು ಹಾಜರಿದ್ದರು.