ಮಡಿಕೇರಿ, ಅ. 2: ಸುಳ್ಯ ಸಮೀಪದ ಅಡ್ಕಾರು ಎಂಬಲ್ಲಿ ನಿನ್ನೆ ದಿನ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಮೃತರ ಅಂತ್ಯಕ್ರಿಯೆ ಇಂದು ಮುಂಜಾನೆ ಕೊಟ್ಟಮುಡಿಯಲ್ಲಿ ನೆರವೇರಿತು.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಟುಂಬದ ಮತ್ತೋರ್ವ ಸದಸ್ಯ ಉಮ್ಮರ್ ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ದುಬೈನಲ್ಲಿರುವ ಮತ್ತೋರ್ವ ಸದಸ್ಯ ಜಿಲ್ಲೆಗೆ ಆಗಮಿಸುತ್ತಿರುವದಾಗಿ ಕುಟುಂಬ ಮೂಲಗಳು ತಿಳಿಸಿವೆ. ಕುಟುಂಬದ ನಾಲ್ವರು ಒಮ್ಮೆಲೆ ಸಾವಿಗೀಡಾಗಿರುವದರಿಂದ ಕುಟುಂಬ ವಲಯ ಹಾಗೂ ಕೊಟ್ಟಮುಡಿ ವ್ಯಾಪ್ತಿಯಲ್ಲಿ ಶೋಕ ಮಡುಗಟ್ಟಿದೆ.