ಸುಂಟಿಕೊಪ್ಪ, ಅ. 2: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರಿನಿಂದ ಯಡವಾರೆ, ಕಾಜೂರಿಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ, ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡಲು ಹರ ಸಾಹಸ ಪಡುವಂತಾಗಿದೆ.

ಆಗಸ್ಟ್ 2018 ರಲ್ಲಿ ಬಂದ ಅತಿವೃಷ್ಟಿಯಿಂದ ತೀರಾ ಹಾಳಾಗಿದ್ದ ಈ ರಸ್ತೆಯನ್ನು ಈ ವರ್ಷ ಜೂನ್‍ನಲ್ಲಿ ಹಾಸನ ಜಿಲ್ಲೆಯ ಗುತ್ತಿಗೆದಾರರು ಕಾಮಗಾರಿ ಅರ್ಧಂಬಧರ್À ಪೂರೈಸಿ ಮಧ್ಯದಲ್ಲೇ ಬಿಟ್ಟು ಹಿಂತೆರಳಿದರು. ಐಗೂರು ಮಾರಿಯಮ್ಮ ದೇವಾಲಯದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿದ ಮೋರಿಯಿಂದ ರಸ್ತೆ ಒಂದು ಬದಿ ಕುಸಿದಿದೆ. ಬಸವೇಶ್ವರ ದೇವಾಲಯದ ಮುಂಭಾಗದ ರಸ್ತೆ ಗುಂಡಿ ಬಿದ್ದು, ವಾಹನ ಸಂಚರಿಸಲು ಸಾಧ್ಯವಾಗದೆ ವಾಹನ ಚಾಲಕರು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಆಟೋ ಚಾಲಕರು ಈ ರಸ್ತೆಗಾಗಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಲ್ಲುಕೋರೆ ಬಳಿ ರಸ್ತೆಯೇ ಇಲ್ಲದಂತಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ತೀರಾ ಹದಗೆಟ್ಟು ಹೋದ ರಸ್ತೆ ಕಾಮಗಾರಿ ನಡೆಸಲು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.