ಮಡಿಕೇರಿ, ಅ. 2 : ಅಹಿಂಸಾ ಮಾರ್ಗದಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ ಹಾಗೂ ದೇಶದ ಪ್ರಧಾನಿ ದಿ. ಲಾಲ್‍ಬಹುದ್ದೂರ್ ಶಾಸ್ತ್ರಿ ಅವರುಗಳಿಗೆ ನಮಿಸುವ ಮೂಲಕ ಇಂದು ಮಕ್ಕಳ ದಸರಾದಲ್ಲಿ ಮಕ್ಕಳು ಸಂಭ್ರಮಿಸಿದರು. ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕೂಡ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.ಗಾಂಧಿ ಮೈದಾನದ ವಿಶಾಲ ಪೆಂಡಾಲ್‍ನೊಳಗೆ ವಿವಿಧ ಶಾಲೆಗಳ ಮಕ್ಕಳು, ಸಾಕಷ್ಟು ಕೃಷಿ ಉತ್ಪನ್ನಗಳು, ತೋಟಗಾರಿಕಾ ಬೆಳೆಗಳೊಂದಿಗೆ, ವಾಣಿಜ್ಯ ವಸ್ತುಗಳನ್ನು ಕ್ರೋಢಿಕರಿಸಿ ವ್ಯಾಪಾರ ನಡೆಸುವ ಮೂಲಕ ಜನಮನ ಗೆದ್ದು ಹರ್ಷೋಲ್ಲಾಸ ವ್ಯಕ್ತಪಡಿಸಿದರು.ನೂರಾರು ಸಂಖ್ಯೆಯಲ್ಲಿ ಪುಟ್ಟ ಪುಟ್ಟ ವ್ಯಾಪಾರ ಕೇಂದ್ರಗಳನ್ನು ತಮ್ಮದೇ ಕಲ್ಪನೆಯಲ್ಲಿ ತೆರೆದು ಕೊಂಡಿದ್ದ ಮಕ್ಕಳು ತಾವು ವಿದ್ಯಾರ್ಥಿಗಳು ಎಂಬ ಮಾನಸಿಕತೆ ಯಿಂದ ಹೊರಬಂದು ಲುಂಗಿ ಸುತ್ತಿಕೊಂಡು, ಹೆಗಲಿನಲ್ಲಿ ಮುಂಡಾಸು (ಟವೆಲ್) ಏರಿಸಿ ಸೊಪ್ಪು, ತರಕಾರಿ, ಹಣ್ಣು - ಹಂಪಲು ಇತ್ಯಾದಿ ಮಾರಾಟ ನಿರತರಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಮಾಡಿತು.

ಅಕ್ಷರಶಃ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ವ್ಯಾಪಾರಿಗಳು ಸಂತೆ ದಿನಗಳಂದು ನಡೆಸುವ ವ್ಯಾಪಾರಕ್ಕಿಂತಲೂ ಭಿನ್ನವಾಗಿ ಇಂದಿನ ಮಕ್ಕಳ ಸಂತೆ ಹಿರಿಯ ಮೆಚ್ಚುಗೆ ಗಳಿಸಿತು.

ವಿಭಿನ್ನ ತರಕಾರಿ, ಹಣ್ಣು ಮಾರಾಟ: ಕೇವಲ ಸೊಪ್ಪು ತರಕಾರಿಗೆ ಸೀಮತಗೊಳ್ಳದ ಸಂತೆಯಲ್ಲಿ ಗೆಡ್ಡೆ ಗೆಣಸು, ಕಬ್ಬು, ಶುಂಠಿ, ನಿಂಬೆ ಪರಂಗಿ ಹಣ್ಣು, ಬೆಣ್ಣೆಹಣ್ಣು, ಕೈಂಪುಳಿ, ಮಾಡಹಾಗಲ, ಚಕ್ಕೋತ, ಕಿತ್ತಾಳೆ, ವೀಳ್ಯ, ಕಾಂಚಂಪುಳಿ, ಜೇನು, ಬಾಳೆಹಣ್ಣಿನ ವಿವಿಧ ತಳಿಗಳ ಸಹಿತ ಸಾಕಷ್ಟು ಉತ್ಪನ್ನಗಳು ಮಾರಾಟಗೊಂಡವು.

ಬೇರೆ, ಬೇರೆ ಶಾಲೆಗಳ ಮಕ್ಕಳು ವಿಭಿನ್ನ ಪೋಷಾಕಿನಲ್ಲಿ ಕಾಣಿಸಿಕೊಂಡರೆ, ನೈಜ ರೈತನ ವೇಷದಲ್ಲಿ ಲುಂಗಿ, ಟವೆಲ್ ಇತ್ಯಾದಿ ಉಡುಗೆಯಲ್ಲಿದ್ದ ಬಾಲಕರು, ಪ್ಲಾಸ್ಟಿಕ್ (ಮೊದಲ ಪುಟದಿಂದ) ನಿರ್ಮೂಲನೆಯ ಸಂದೇಶದೊಂದಿಗೆ ಗ್ರಾಹಕರಿಗೆ ಗಾಂಧಿ ಜಯಂತಿ ಶುಭಾಶಯ ಕೋರುತ್ತಾ, ಗಮನ ಸೆಳೆದಿದ್ದು, ಹೆಚ್ಚಿನವರ ಮನ್ನಣೆ ಪಡೆಯುವಂತಾಯಿತು.

ಛದ್ಮವೇಷ : ಮಕ್ಕಳ ದಸರಾ ಸಂತೆಯೊಂದಿಗೆ ಪುಟಾಣಿಗಳಿಂದ ವಿವಿಧ ಛದ್ಮವೇಷ ಸ್ಪರ್ಧೆ, ದೇಶಭಕ್ತಿ ಗಾಯನ, ಜಾನಪದ ಹಾಡು, ದೇವರ ನಾಮ ಇತ್ಯಾದಿಯೊಂದಿಗೆ ಎಳೆಯರ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವೂ ಮೂಡಿ ಬಂತು. ಇಡೀ ಗಾಂಧಿ ಮೈದಾನದ ವಿಶಾಲ ಪೆಂಡಾಲ್‍ನ ಉದ್ದಗಲಕ್ಕೂ ರೈತನೊಂದಿಗೆ, ವಿವಿಧ ಕಾಯಕನಿರತ ಯೋಗಿಗಳು, ದೇಶದ ಗಣ್ಯರನ್ನು ಕಣ್ಮನದಲ್ಲಿ ತಂದುಕೊಳ್ಳುವಂತಹ ಕ್ಷಣಗಳು ಮಕ್ಕಳ ದಸರಾ ವೇದಿಕೆಯಿಂದ ಗೋಚರಿಸುವಂತಾಯಿತು.

ಮಂಟಪಗಳ ಆಕರ್ಷಣೆ: ಮಕ್ಕಳ ಸಂತೆಯೊಂದಿಗೆ ದಸರಾ ವೈಭವವು ಕಂಡು ಬಂದಿತು. ಕಿವಿಗಡಚಿಕ್ಕುವ ಶಬ್ಧಗಳೊಂದಿಗೆ ಸುರಾಸುರರ ಕಥಾ ಸಾರಾಂಶವನ್ನು ಹೊಂದಿದ್ದ ಚಲನ-ವಲನಗಳ ಕಲಾಕೃತಿಗಳನ್ನೊಳಗೊಂಡ ಮಂಟಪಗಳು ಜನ-ಮನ ಸೂರೆಗೊಂಡವು. ತಾವೂ ದೊಡ್ಡವರಿಗೇನು ಕಡಿಮೆಯಿಲ್ಲವೆಂಬಂತೆ ಮಕ್ಕಳೇ ತಯಾರಿಸಿದ ಮಂಟಪಗಳು ದಸರಾ ವೈಭವವನ್ನು ತೋರ್ಪಡಿಸಿದಂತಿತ್ತು.

ವೇಷದಾರಿಗಳು: ಮಕ್ಕಳಿಗಾಗಿ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಮಕ್ಕಳು ವಿವಿಧ ವೇಷ ತೊಟ್ಟು ಗಮನ ಸೆಳೆದರು. ತೆಂಗಿನಕಾಯಿ, ದ್ರಾಕ್ಷಿ, ಬಾಳೆಹಣ್ಣು ಹೀಗೆ ವಿವಿಧ ಹಣ್ಣು - ತರಕಾರಿಗಳ ವೇಷ ತೊಟ್ಟಿದ್ದ ಪುಟಾಣಿಗಳ ಭಂಗಿ ಮುಗ್ಧತೆಯೊಂದಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ದೇವಾನುದೇವತೆಗಳ, ರಕ್ಕಸರ, ಸ್ವಾತಂತ್ರ್ಯ ಹೋರಾಟಗಾರರ ವೇಷ ತೊಟ್ಟು ಗಮನ ಸೆಳೆದರು.

ರೋಟರಿ ಮಿಸ್ಟಿಹಿಲ್ಸ್ ಸಹಯೋಗದೊಂದಿಗೆ ನಡೆದ ಮಕ್ಕಳ ದಸರಾದಲ್ಲಿ ಶಾಸಕ ಅಪ್ಪಚ್ಚು ರಂಜನ್, ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ, ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಗೌರವ ಕಾರ್ಯದರ್ಶಿ ಎಂ.ಎಲ್. ರಮೇಶ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ರವಿ, ಸಂಚಾಲಕ ಅನಿಲ್ ಎಚ್.ಟಿ. ಸೇರಿದಂತೆ ಇತರ ಪದಾಧಿಕಾರಿಗಳು, ಪ್ರಮುಖರು ಮಕ್ಕಳ ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು.

ವಿವಿಧ ಶಾಲಾ ಮಕ್ಕಳೊಂದಿಗೆ ನಗರದ ಬಾಲಕ-ಬಾಲಕಿಯರ ಮಂದಿರಗಳ ಮಕ್ಕಳು ಕೂಡ ಸಂತೆಯೊಂದಿಗೆ ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿ ಗಮನ ಸೆಳೆದರು.

ಮಕ್ಕಳ ಸಂತೆಯಲ್ಲಿ ತರಕಾರಿಗಳು, ಹಣ್ಣು ಹಂಪಲುಗಳು ಮಾತ್ರವಲ್ಲದೆ ತಿಂಡಿ - ತಿನಿಸುಗಳು, ತಂಪು ಪಾನಿಯಗಳು ಇದ್ದವು. ಮಕ್ಕಳೇ ಇಲ್ಲಿ ಅಡುಗೆಯವರಾಗಿದ್ದರು. ಅಡುಗೆಯವರಂತೆ ಉಡುಗೆ ತೊಟ್ಟು ಪಾನಿಪುರಿ, ಮಸಾಲೆ ಪುರಿಗಳನ್ನು ಮಾಡಿಕೊಡುತ್ತಿದ್ದ ಮಕ್ಕಳ ಚತುರತೆ ನೋಡುಗರಲ್ಲಿ ಅಚ್ಚರಿ ಮೂಡಿಸಿತು. ಬನ್ನಿ ಅಂಕಲ್, ಬನ್ನಿ ಆಂಟಿ ತಕೋಳ್ಳಿ ಪ್ಲೀಸ್..., ಪಾನಿಪುರಿ, ಮಸಾಲಪುರಿ, ಜ್ಯೂಸ್..., ಹತ್ತು ರೂಪಾಯಿಗೆ ಎರಡು ಜ್ಯೂಸ್ ಎಂದು ಮಕ್ಕಳು ಕೂಗಿ ಕರೆಯುತ್ತಾ ವ್ಯಾಪಾರ ಕುದುರಿಸುತ್ತಿದ್ದುದು ಗಮನ ಸೆಳೆದವು.