ವೀರಾಜಪೇಟೆ, ಅ. 2: ಪ್ರತಿಫಲಾಪೇಕ್ಷೆ ಇಲ್ಲದೆ ಹಗಲು ಇರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸುವಂತಾಗಬೇಕು. ಪೌರ ಕಾರ್ಮಿಕರ ಸೇವೆ ಅಮೋಘವಾದದ್ದು. ಪೌರ ಕಾರ್ಮಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಸರಕಾರದೊಂದಿಗೆ ವ್ಯವಹರಿಸಿ ಕ್ರಮ ಕೈಗೊಳ್ಳಲಾಗುವದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಕೆ. ಪುರಂದರ ಮಾತನಾಡಿ, ಮೂರು ತಿಂಗಳ ಹಿಂದೆ ವೀರಾಜಪೇಟೆ ಪಟ್ಟಣದಲ್ಲಿ ಭಾರೀ ಮಳೆಯಿಂದ ಜಲಪ್ರಳಯ ಉಂಟಾದಾಗಲೂ ಪೌರ ಕಾರ್ಮಿಕರು ನಿಸ್ವಾರ್ಥ ಸೇವೆ ಸಲ್ಲಿಸಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸಭೆಯನ್ನುದ್ದೇಶಿಸಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್ ಮಾತನಾಡಿದರು. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ 40 ಮಂದಿ ಪೌರ ಕಾರ್ಮಿಕರುಗಳನ್ನು ಸನ್ಮಾನಿಸಿ, ತಲಾ ರೂ. 3600 ಗೌರವ ಧನವನ್ನು ನೀಡಲಾಯಿತು. ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪಟ್ಟಣ ಪಂಚಾಯಿತಿಯ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರಿಗೆ ಬೆಳಗಿನಿಂದಲೇ ಆಟೋಟಗಳ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಿದರು.