ಕಣಿವೆ, ಅ. 2: ನಮ್ಮ ದೇಶದ ಸನಾತನ ಪರಂಪರೆಯ ಆಚರಣೆಗಳಲ್ಲಿ ಬಹು ಮುಖ್ಯವಾದ ಸ್ತ್ರೀಯರನ್ನು ಗೌರವಿಸುವ, ಆದರಿಸುವ ಹಾಗೂ ಆರಾಧಿಸುವ ಬಾಗಿನ ಕಾರ್ಯಕ್ರಮಕ್ಕೆ ಬುಧವಾರ ಕೊಡ್ಲಿಪೇಟೆಯ ಬಸವೇಶ್ವರ ಕಲ್ಯಾಣ ಮಂಟಪ ಸಾಕ್ಷಿಯಾಯಿತು. ಗ್ರಾಮದಿಂದ ಬೇರೆ ಬೇರೆ ಊರುಗಳಿಗೆ ವಿವಾಹವಾಗಿ ತೆರಳಿದ್ದ ಊರಿನ ಹೆಣ್ಣು ಮಕ್ಕಳನ್ನು ಕರೆದು ಒಂದೆಡೆ ಸೇರಿಸಿ ಅವರಿಗೆ ಸೋದರ ಭಾವನೆ ತುಂಬುವ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಕೊಡ್ಲಿಪೇಟೆಯ ವೀರಶೈವ ಸಮಾಜದ ಹೆಸರಿನಲ್ಲಿ ಹಿರಿಯ ನ್ಯಾಯವಾದಿ ಅದೇ ಊರಿನ ಎಚ್.ಎಸ್.ಚಂದ್ರಮೌಳಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದೇ ಮೊದಲ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಮಂದಿ ಮುತ್ತೈದೆ ಹೆಣ್ಣು ಮಕ್ಕಳು ಹಾಗೂ ತಾಯಂದಿರು ಸೇರಿದ್ದರು. ಅಷ್ಟೂ ಮಂದಿಗೂ ಬಿದಿರಿನ ಜೋಡಿ ಮರಗಳ ಒಳಗೆ ತುಂಬಿಸಿದ್ದ ಅರಿಶಿಣ, ಕುಂಕುಮ, ಸಿಂಧೂರ, ಕನ್ನಡಿ, ಕಾಡಿಗೆ, ಅಕ್ಕಿ, ತೊಗರಿಬೇಳೆ, ಉದ್ದಿನ ಬೇಳೆ, ತೆಂಗಿನ ಕಾಯಿ, ವೀಳ್ಯದೆಲೆ, ಅಡಿಕೆ, ಬಾಚಣಿಗೆ ಹೀಗೆ ವಿವಿಧ ದ್ರವ್ಯಗಳು ತುಂಬಿದ ಬಾಗಿನದ ಕಿಟ್ಗಳನ್ನು ನೀಡಲಾಯಿತು. ಇದನ್ನು ಪಡೆದ ಹೆಂಗಳೆಯರು ತವರು ನೆಲಕ್ಕೆ ಒಮ್ಮೆ ನಮಸ್ಕರಿಸಿದರು. ಕಾರ್ಯಕ್ರಮದಲ್ಲಿದ್ದ ಮಹಿಳೆಯರು ತಾವು ಎಳೆಯರಾಗಿದ್ದಾಗಿನಿಂದ ವಿವಾಹ ಆಗಿ ಬೇರೆಡೆಗೆ ಕಳಿಸುವ ತನಕ ಆ ತವರಿನ ನೆಲದಲ್ಲಿನ ನೆನಪುಗಳನ್ನು ನೆನೆಯುತ್ತಾ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.
ಬಾವುಕತೆಯ ಮೂಲಕ ಹೆಂಗಳೆಯರು ನೆನಪಿನ ಬುತ್ತಿ ಬಿಚ್ಚಿಟ್ಟರು. ತವರು ಮನೆಯವರು ಒಂದು ವೇಳೆ
(ಮೊದಲ ಪುಟದಿಂದ) ಮರೆತರೂ ತವರೂರು ನಮ್ಮನ್ನು ಕೈ ಬೀಸಿ ಬಾಗಿನಕ್ಕೆ ಕರೆಯಿತಲ್ಲಾ ಎಂದು ಹೆಣ್ಣುಮಗಳೊಬ್ಬಳ ಕಣ್ಣಂಚು ತೇವವಾಗಿತ್ತು. ಹಾಲುಂಡ ತವರಿಗೆ ಏನೆಂದು ಹರಸಲಿ, ಹೊಳೆ ದಂಡೆಲಿರುವ ಕರಕೀಯ ಕುಡಿಯಂಗ, ಹಬ್ಬಲಿ ಅವರ ರಸಬಳ್ಳಿ ಎಂಬ ಜಿ.ಎಸ್.ಶಿವರುದ್ರಪ್ಪ ಅವರ ಪದ್ಯದ ಸಾಲಿನಂತೆ ಒಲವು ಹಾಗೂ ಜೀವನದ ಗೆಲವು ಕೊಟ್ಟಂತಹ ತನ್ನ ತವರಿಗೆ ಏನನ್ನು ಕೊಟ್ಟರೂ ಸಾಲದು ಎಂದು ಗರತಿಯೊಬ್ಬಳು ತವರನ್ನು ನೆನೆಯುತ್ತಾಳೆ.
ಕಾರ್ಯಕ್ರಮದಲ್ಲಿ ಬಾಗಿನ ಪಡೆದ ಹೆಣ್ಣು ಮಕ್ಕಳು ಹಾಗೂ ಆಕೆಯ ಅವಲಂಬಿತರಿಗೆ ರುಚಿ, ಶುಚಿಯಾದ ಹೋಳಿಗೆ ಊಟವನ್ನು ಕೂಡ ಸಿದ್ಧಪಡಿಸಲಾಗಿತ್ತು. ಬಳಿಕ ಬೆಂಗಳೂರಿನ ಖ್ಯಾತ ಗಾಯಕ ಕೆ. ಮುನಿರಾಜು ತಂಡದಿಂದ ಸಂಗೀತ ಕಾರ್ಯಕ್ರಮವೂ ಇತ್ತು.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಹಲವಾರು ಪದಾಧಿಕಾರಿಗಳು, ವೀರಶೈವ ಹಾಗೂ ಇತರ ಸಮಾಜಗಳ ಪ್ರಮುಖರು ಪಾಲ್ಗೊಂಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆದ ವಿಶೇಷ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.