ಚೆಟ್ಟಳ್ಳಿ, ಅ. 2: ಚೆಟ್ಟಳ್ಳಿ ಪೊಮ್ಮಕ್ಕಡ ಕೂಟದ ಕೈಲ್ ಮುಹೂರ್ತ ಸಂತೋಷಕೂಟ ಸಂಘದ ಅಧ್ಯಕ್ಷ ಮುಳ್ಳಂಡ ಶೋಭಾ ಚಂಗಪ್ಪ ಅಧ್ಯಕ್ಷತೆಯಲ್ಲಿ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶೋಭಾ ಚಂಗಪ್ಪ, ಪೊಮ್ಮಕ್ಕಡ ಕೂಟಕ್ಕೆ ತಮ್ಮ ಮನೆಯ ಗಂಡು ಮಕ್ಕಳು ಸದಸ್ಯತ್ವ ಪಡೆದು ಕೈ ಜೋಡಿಸಿದರೆ ಕೊಡಗಿನ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ ಮಾಡಬಹುದೆಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚೆಟ್ಟಳ್ಳಿಯ ನಿವೃತ ಏರ್‍ಫೋರ್ಸ್ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಮಾತನಾಡಿ, ಕೊಡಗಿನಲ್ಲಿ ಹೆಚ್ಚಾಗಿ ಇತೀಚೆಗೆ ಮಹಿಳೆಯರ ಸಂಘವು ಜಾಸ್ತಿಯಾಗುತ್ತಿದ್ದು, ಇದು ಸಮಾಜದ ಒಳ್ಳೆ ಬೆಳವಣಿಗೆಯಾಗಿದೆ. ಪುರುಷರು ಸಹ ಕ್ಲಬ್ ಮತ್ತು ಇತರ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ನಮ್ಮ ಆಚಾರ ವಿಚಾರ ಮತ್ತು ಪದ್ಧತಿ ಪರಂಪರೆಗೆ ಒತ್ತುಕೊಡುವ ನಿಟ್ಟಿನಲ್ಲಿ ಇಂತಹ ಸಂಘವನ್ನು ಎಲ್ಲ ಊರಿನಲ್ಲಿ ಸ್ಥಾಪನೆ ಮಾಡುವಂತಾಗಬೇಕೆಂದರು.

ಪಳಂಗಂಡ ಗೀತಾ ಮತ್ತು ಸುಮಿ ಅವರಿಂದ ಕಿರುನಾಟಕ ಪ್ರದರ್ಶನ ಗೊಂಡಿತು. ಬೆಸಗೂರಿನ ಮಂದತ್ತವ್ವ ಗೆಜ್ಜೆ ತಂಡ್ ತಂಡದಿಂದ ಮನ ಸೆಳೆಯುವ ನೃತ್ಯ ಪ್ರದರ್ಶನ ನಡೆಯಿತು. ಆಫ್ ರೋಡ್ ಚಾಂಪಿಯನ್ ಕೊಂಗೆಟ್ಟಿರ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು. ನೆರೆದಿದ್ದ ಸಂಘದ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಮನೋರಂಜನೆ ಕಾರ್ಯಕ್ರಮ ನಡೆಯಿತು. ನಂತರ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಯಿತು.

ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಸ್ವಾಗತಿಸಿದರು, ಐಚೆಟ್ಟಿರ ಸುನಿತಾ ಮಾಚಯ್ಯ ನಿರೂಪಿಸಿದರು. ಸಂಘದ ಖಜಾಂಚಿ ಗಂಗೂ ಅಚ್ಚಯ್ಯ ಮತ್ತಿತರರು ಹಾಜರಿದ್ದರು.