ಕುಶಾಲನಗರ, ಅ. 2: ಕೊಡಗು ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳ ಜೊತೆಗೆ ಪ್ರೀತಿ, ವಿಶ್ವಾಸದೊಂದಿಗೆ ಒಗ್ಗಟ್ಟಿನಿಂದ ಇದ್ದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಬೆಂಗಳೂರು ಕೊಡವ ಸಮಾಜದ ಮಾಜಿ ಗೌರವ ಕಾರ್ಯದರ್ಶಿ ಚೆನ್ನಪಂಡ ರವಿ ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕೊಡವ ಸಮಾಜದ ಕೈಲ್‍ಪೊಳ್ದ್ ಆಟೋಟ ಮತ್ತು ಸಂತೋಷಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರಾಕೃತಿಕ ವಿಕೋಪಗಳಿಗೆ ಭಯಪಟ್ಟು ಆಸ್ತಿಯನ್ನು ಪರರಿಗೆ ಮಾರಾಟ ಮಾಡದೆ ಜಿಲ್ಲೆಯಲ್ಲಿ ಬದುಕು ಸಾಗಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಕೊಡವ ಸಂಸ್ಕøತಿ, ಆಚಾರ ವಿಚಾರಗಳ ಉಳಿವಿಗೆ ಸಮಾಜಗಳು ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಸಮುದಾಯದ ನಡುವೆ ಪ್ರೀತಿ, ವಿಶ್ವಾಸದ ಕೊರತೆ ಕಂಡುಬರುತ್ತಿದ್ದು ಇದು ತೊಲಗಬೇಕಾಗಿದೆ. ಸಮಾಜಗಳ ಮೂಲಕ ಉತ್ತಮ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ ಮಾತನಾಡಿ, ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಿದ್ದು, ರೂ. 10 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದರು. ಮರಡಿಯೂರು ಗ್ರಾಮದ ಚೇಂದಂಡ ಪೊನ್ನಪ್ಪ ಅವರು ಜಾಗ ಖರೀದಿಗಾಗಿ ರೂ. 10 ಲಕ್ಷ ದಾನ ನೀಡಿರುವ ಬಗ್ಗೆ ಮಾಹಿತಿ ಒದಗಿಸಿದರು.

ಕೈಲ್‍ಪೊಳ್ದ್ ಸಮಾರಂಭ ಅಂಗವಾಗಿ ಸಮಾಜದ ಆವರಣದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮಕ್ಕೆ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ ಚಾಲನೆ ನೀಡಿದರು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಹಿರಿಯರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಒಳಾಂಗಣ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಅಯಿಲಪಂಡ ಮಂದಣ್ಣ ಇದ್ದರು. ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಸ್ವಾಗತಿಸಿ, ಎಳ್ತಂಡ ರಂಜಿತ್, ಉಡುವೆರ ಆಶ್ರಿತ್, ಬೊಳ್ಳಚಂಡ ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು.

ಸಮಾಜದ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಮೇವಡ ಚಿಂಗಪ್ಪ ಸೇರಿದಂತೆ ಕುಶಾಲನಗರ ಕೊಡವ ಸಮಾಜದ ನಿರ್ದೇಶಕರುಗಳು ಉಪಸ್ಥಿತರಿದ್ದರು.