ಕೂಡಿಗೆ, ಸೆ. 30: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮಸಭೆಯು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜೈನಬಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಂಜರಾಯಪಟ್ಟಣ ಗ್ರಾಮದಲ್ಲಿ ರುದ್ರಭೂಮಿಯ ವಿಚಾರವಾಗಿ ಕಳೆದ ಗ್ರಾಮಸಭೆಯಲ್ಲಿ ಜಾಗ ಗುರುತಿಸಿದ್ದು, ಆ ಜಾಗವನ್ನು ಅರಣ್ಯ ಇಲಾಖೆಯ ವತಿಯಿಂದ ತೆರವುಗೊಳಿಸಿ ಕಂದಾಯ ಇಲಾಖೆಯ ಮುಖೇನ ಸರ್ವೇ ನಡೆಸಿ ನಂಜರಾಯಪಟ್ಟಣ ಗ್ರಾಮಸ್ಥರಿಗೆ ಹಿಂದೂ ರುದ್ರಭೂಮಿಗೆ ಜಾಗವನ್ನು ಗುರುತಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೆ ಪ್ರಗತಿ ಕಾಣದ ಬಗ್ಗೆ ಗ್ರಾಮಸ್ಥರಾದ ಪಾಪಣ್ಣ, ಚಂದ್ರು ಮತ್ತಿತರು ಸಭೆಯಲ್ಲಿ ಪ್ರಸ್ತಾಪಿಸಿ, ಚರ್ಚೆ ನಡೆಸಿದರು.

ಇದಕ್ಕೆ ಸಂಬಂಧಿಸಿದಂತೆ ಇಲಾಖಾವಾರು ಪತ್ರ ವ್ಯವಹಾರದ ಬಗ್ಗೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ಮಾಹಿತಿ ನೀಡಿದರು. ಆದರೆ, ಗ್ರಾಮಸ್ಥರು ತೋರಿಸಿರುವ ಜಾಗವು ಮೀಸಲು ಅರಣ್ಯ ಪ್ರದೇಶದಲ್ಲಿರುವದರಿಂದ ಯಾವದೇ ರೀತಿಯ ಖಾತೆ ಬದಲಾವಣೆಗೆ ಸಾಧ್ಯವಾಗಿರುವದಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಲತೀಫ್ ಮಾತನಾಡಿ, ರುದ್ರಭೂಮಿ ಗ್ರಾಮಕ್ಕೆ ಪ್ರಮುಖವಾಗಿರುವ ವಿಷಯವಾಗಿದ್ದು, ಈಗಾಗಲೇ ಒಂದು ಪಂಗಡಕ್ಕೆ ನೀಡಿರುವ ಜಾಗದ ಸಮೀಪದಲ್ಲಿ ಹಿಂದೂ ರುದ್ರಭೂಮಿ ಯನ್ನು ನೀಡುವಂತೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸುವ ಬಗ್ಗೆ ಸಲಹೆ ನೀಡಿದರು. ಅರಣ್ಯ ಇಲಾಖೆಯ ಪರಿಸರ ಸಂಪತ್ತನ್ನು ನಾಶಮಾಡದೆ ಗ್ರಾಮಸ್ಥರು ಸದ್ಬಳಸಿಕೊಳ್ಳಲು ಗ್ರಾಮಸ್ಥರನ್ನೊಳ ಗೊಂಡಂತೆ ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ನೀಡುವ ಕಾಳು ಮೆಣಸು ಬಳ್ಳಿಗಳ ವಿಚಾರವಾಗಿ ಚರ್ಚೆಗಳು ನಡೆದು ಈಗ ನೀಡುತ್ತಿರುವ ಕಾಳು ಮೆಣಸು ಬಳ್ಳಿ ಯಾವದೇ ರೈತರಿಗೂ ಸದುಪಯೋಗ ವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಕನಿಷ್ಟ 50 ರೈತರಿಗಾದರೂ ಮೆಣಸು ಬಳ್ಳಿಯನ್ನು ಉಚಿತವಾಗಿ ವಿತರಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿದ್ದ ಕೃಷಿ ಇಲಾಖೆ, ವಿದ್ಯುತ್ ಇಲಾಖೆ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆ, ಆಹಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಮಾತನಾಡಿ, ನಂಜರಾಯ ಪಟ್ಟಣ ಗ್ರಾಮ ಪಂಚಾಯ್ತಿವ್ಯಾಪ್ತಿಗೆ ಈಗಾಗಲೇ ಜಿಲ್ಲಾ ಪಂಚಾಯ್ತಿ ವತಿಯಿಂದ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜೊತೆಯಲ್ಲಿ ಉದ್ಯೋಗ ಮತ್ತು ಇನ್ನಿತರ ಕಾಮಗಾರಿಗಳ ಕ್ರಿಯಾಯೋಜನೆಯು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಕಾಮಗಾರಿಗಳನ್ನು ನಡೆಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ವಾಗುವಂತೆ ಕಾರ್ಯನಿರ್ವ ಹಿಸಲಾಗುವದು. ಪ್ರಮುಖವಾಗಿ ರುದ್ರಭೂಮಿಯ ವಿಚಾರವಾಗಿ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.

ತಾಲೂಕು ಪಂಚಾಯಿತಿ ಸದಸ್ಯ ವಿಜುಚಂಗಪ್ಪ ಮಾತನಾಡಿ, ತಾಲೂಕು ಪಂಚಾಯಿತಿ ವತಿಯಿಂದ ಈಗಾಗಲೇ ವಿವಿಧ ಇಲಾಖೆಗಳ ಮೂಲಕ ಸಿಗಬೇಕಾದ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ತಾ.ಪಂ ಸಭೆಯಲ್ಲಿ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೆ ಹೆಚ್ಚಿನ ಅನುದಾನ ಮತ್ತು ನಿವೇಶನ ರಹಿತರಿಗೆ ಮನೆ ಒದಗಿಸುವ ಬಗ್ಗೆ ಪ್ರಯತ್ನ ಮಾಡಲಾಗುವದು ಎಂದರು.

ಗ್ರಾ.ಪಂ ಅಧ್ಯಕ್ಷೆ ಜೈನಭ ಮಾತನಾಡಿ, ಗ್ರಾಮದ ಪ್ರಗತಿಗೆ ಗ್ರಾಮಸ್ಥರ ಸಹಕಾರ ಪ್ರಮುಖ ವಾಗಿರುತ್ತದೆ. ಗ್ರಾಮಸಭೆಯಲ್ಲಿ ಚರ್ಚೆಗೊಂಡು ಎಲ್ಲಾ ವಿಚಾರಗಳನ್ನು ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ರವಾನಿಸಿ ಅಭಿವೃದ್ಧಿ ಕೆಲಸದತ್ತ ಕಾರ್ಯೋನ್ಮುಖರಾಗುತ್ತೇವೆ. ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರವನ್ನು ಕೋರಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಗ್ರಾಮದ ಉಪ ಕಾಮಗಾರಿ ಗಳನ್ನು ಕೈಗೊಳ್ಳಲು ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು. ನಂತರ ಕಳೆದ ಗ್ರಾಮಸಭೆಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಜೆ.ಸಿ. ಕುಮಾರಿ, ಸದಸ್ಯರಾದ ಟಿ.ಕೆ. ಸೋಮೇಶ್, ಜೆ.ಸಿ. ತಮ್ಮಯ್ಯ, ಎಂ.ಎನ್. ಚಂದ್ರಾವತಿ, ಎಂ. ಅಯ್ಯಂಡ್ರ ಲೋಕನಾಥ್, ಆರ್.ಸಿ. ಮಲ್ಲಿಗೆ, ಕೆ.ಜಿ. ನವೀನ್ ಸೇರಿದಂತೆ ಗ್ರಾಮಸ್ಥರು ಇದ್ದರು.