ಮಡಿಕೇರಿ, ಅ.1 ಲಾರಿಗಳಲ್ಲಿ ಮರದ ದಿಮ್ಮಿಗಳನ್ನು ಮಿತಿಗಿಂತ ಹೆಚ್ಚಾಗಿ ಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಗೆ ಜಿಲ್ಲಾ ಟಿಂಬರ್ ಮರ್ಚೆಂಟ್ಸ್ ಮತ್ತು ಲಾರಿ ಚಾಲಕರ ಅಸೋಸಿಯೇಷನ್ ಬೆಂಬಲ ನೀಡಲಾಗುತ್ತದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ಎ ಶಮೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪಲುವಿನ ಅಸೋಸಿಯೇಷನ್ ಕೇಂದ್ರ ಕಚೇರಿಯಲ್ಲಿ ನಡೆದ ಸಂಘದ ಸಭೆಯಲ್ಲಿ ಸದಸ್ಯರು, ಮಿತಿಗಿಂತ ಹೆಚ್ಚಿನ ಟಿಂಬರ್ ಸಾಗಾಟ ಮಾಡದಂತೆ ನಿರ್ಣಯ ಕೈಗೊಂಡಿದ್ದಾರೆ ಎಂದರು.
ಆರ್‍ಟಿಓ ನಿಗದಿಪಡಿಸಿದಂತೆ 6 ಚಕ್ರ ವಾಹನದಲ್ಲಿ 12 ಟನ್, 10 ಚಕ್ರ ವಾಹನದಲ್ಲಿ 20 ಟನ್, 12 ಚಕ್ರದ ವಾಹನದಲ್ಲಿ 25 ಟನ್, 15 ಚಕ್ರ ವಾಹನದಲ್ಲಿ 30 ಟನ್ ಮಿತಿಯಲ್ಲಿ ಮರಗಳ ಸಾಗಾಟ ಮಾಡುವದಕ್ಕೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.
ಮರ ಸಾಗಾಟಕ್ಕೆ ವಿಧಿಸಲಾಗಿರುವ ನಿಯಮವನ್ನು ಹಲವರು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರೂಪೇಶ್, ಉಪಾಧ್ಯಕ್ಷರಾದ ರಫೀಕ್, ಬಾಬ, ಸಹ ಕಾರ್ಯದರ್ಶಿ ಇಂಮ್ತಿಯಾಜ್, ಸದಸ್ಯ ಷÀಂಶುದ್ದೀನ್ ಇದ್ದರು.