ಕೂಡಿಗೆ, ಸೆ. 29: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗೋ ಸದನವನ್ನು ಮುಚ್ಚಿದ್ದು, ಈ ಕೇಂದ್ರವನ್ನು ಮರು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಶಾಶ್ವತ ಗೋ ಸದನವನ್ನು ತೆರೆಯಲು ಸೂಚನೆ ನೀಡಿದ್ದು, ರೂ. 10 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ಗೋ ಸದನ ಮರು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಗೋ ಸಾಕಾಣಿಕ ಕೇಂದ್ರವನ್ನು ಕಳೆದ 75 ವರ್ಷಗಳಿಂದ ಹುದುಗೂರು ಗ್ರಾಮಸ್ಥರುಗಳಿಗೆ ಅನುಕೂಲವಾಗುವಂತೆ ತಮ್ಮ ಹಸುಗಳನ್ನು ಕಟ್ಟಿ ಸಂರಕ್ಷಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪಕ್ಕದಲ್ಲಿದ್ದ ಸುಮಾರು 2 ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ರೈತರಿಗೆ ವಿತರಣೆ ಮಾಡಲು ಸಸಿಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದರು.

ಆದರೆ ಇದೀಗ ಜಾಗವನ್ನು ಸಮತಟ್ಟು ಮಾಡಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಆದರೆ, ಸಾಮಾಜಿಕ ಅರಣ್ಯ ಇಲಾಖೆಯವರಿಗೆ ಬದಲಿ ಜಾಗವು ಇರುವದರಿಂದ ಆ ಜಾಗದಲ್ಲಿಯೇ ನರ್ಸರಿ ಗಿಡಗಳನ್ನು ಬೆಳೆಸಬಹುದು. ಸರ್ವೇ ನಂ 2/1 ಜಾಗವು ಸರ್ಕಾರಿ ಜಾಗವು ಕಳೆದ 20 ವರ್ಷಗಳಿಂದಲು ಗೋ ಸದನಕ್ಕಾಗಿ ಮೀಸಲಿಡಲು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ತೀರ್ಮಾನಿಸಿ ಪ್ರಸ್ತಾವನೆಯ ಮುಖೇನ ತಾಲೂಕು ಮತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

ಮದಲಾಪುರ, ಮಾವಿನಹಳ್ಳ, ಸೀತೆಗದ್ದೆ, ಹುಣಸೇಪಾರೆ, ಬ್ಯಾಡಗೊಟ್ಟ ಗ್ರಾಮಗಳಲ್ಲಿ ಹೆಚ್ಚು ಜನರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ಪಶುವೈದ್ಯಕೀಯ ಕೇಂದ್ರವು ಇದೆ. ಈ ಕೇಂದ್ರದ ಆಸುಪಾಸಿನಲ್ಲಿಯೇ ಹಾರಂಗಿ ನದಿಯೂ ಹರಿಯುತ್ತಿದ್ದು, ಹಸುಗಳಿಗೆ ಬೇಕಾಗುವ ಹುಲ್ಲು ಬೆಳೆಯಲು ನೀರಿನ ವ್ಯವಸ್ಥೆ, ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕಿತ್ಸೆ ನೀಡಿಸಲು ಪಶುವೈದ್ಯಕೀಯ ಶಾಲೆಯು ಇರುವದರಿಂದ, ಹಸು ಮತ್ತು ಕರುಗಳನ್ನು ಬೇರೆ ಬೇರೆ ಕಟ್ಟಲು ಕೊಠಡಿಗಳು, ಹುಲ್ಲು ಸಂಗ್ರಹದ ಕೊಠಡಿ ಜಾನುವಾರುಗಳ ಸಂರಕ್ಷಣೆಗೆ ಸೂಕ್ತವಾಗಿದೆ. ಈ ಗೋ ಸದನವನ್ನು ಪುನರ್ ಪ್ರಾರಂಭಿಸಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ಇದೀಗ ಎಂ.ಪಿ. ಅಪ್ಪಚ್ಚುರಂಜನ್ ಅವರು ಮರು ಪ್ರಾರಂಭಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿ, ರೂ. 10 ಲಕ್ಷವನ್ನು ಮಂಜೂರು ಮಾಡಿಸಿದ್ದಾರೆ. ಇನ್ನು ಹೆಚ್ಚುವರಿ ಹಣಕ್ಕೆ ಮತ್ತು ಅಭಿವೃದ್ಧಿಗೆ ರಾಜ್ಯ ಪಶುಸಂಗೋಪನಾ ಸಚಿವರೊಂದಿಗೆ ಚರ್ಚಿಸಿ, ಮಂಜೂರು ಮಾಡಿಸುವದಾಗಿ ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ.