ಮಡಿಕೇರಿ, ಸೆ. 29: ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿದ್ದು, ಇದು ಅವರ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾ ಮನೋವೈದ್ಯ ಡಾ. ಡೆವಿನ್ ಕರ್ಕಾಡ್ ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಐಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡಿಕೊಂಡು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಐಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಮಾತನಾಡಿದರು. ಕಾರ್ಯಾಗಾರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕೌಶಲ್ಯ, ನಿಶ್ಚಿತ, ವಿಕಾಸ್ ಮೊದಲಾದವರ ಸಹಕಾರದಿಂದ ನಡೆಯಿತು. ಈ ಸಂದರ್ಭ ಮನಶಾಸ್ತ್ರಜ್ಞ ರಾಜಶೇಖರ್, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.