ಸಿದ್ದಾಪುರ, ಸೆ. 29: ನಿರಾಶ್ರಿತರಿಂದ ಪತ್ರಕ್ಕೆ ಸಹಿ ಪಡೆಯಲು ಮುಂದಾದ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರದಂದು ಗುಹ್ಯ ಗ್ರಾಮಕ್ಕೆ ತೆರಳಿದ ಕಂದಾಯ ಇಲಾಖೆಯ ಸಹಾಯಕರು, ಮುದ್ರಿಸಿದ ಪತ್ರಕ್ಕೆ ಸಹಿ ಪಡೆಯಲು ಮುಂದಾಗಿದ್ದಾರೆ. ಈ ಸಂದರ್ಭ ಪತ್ರವನ್ನು ಓದಿದ ನಿರಾಶ್ರಿತರು, ಒಕ್ಕಣೆಯಲ್ಲಿರುವ ವಿಷಯವನ್ನು ಖಂಡಿಸಿದ್ದಾರೆ. ಪತ್ರದಲ್ಲಿ ನದಿ ದಡದ ನಿರಾಶ್ರಿತರು ಅನಧಿಕೃತ ಜಾಗದಲ್ಲಿ ವಾಸವಾಗಿದ್ದು, ಅನಧಿಕೃತ ಜಾಗದಿಂದ ತೆರಳುವದಿಲ್ಲ. ಸರಕಾರ ನೀಡುವ ನಿವೇಶನ ಹಾಗೂ ಮನೆಯನ್ನು ಪಡೆಯುವದಿಲ್ಲ ಮತ್ತು ಸರಕಾರ ನೀಡುವ ರೂ. 1 ಲಕ್ಷವನ್ನು ಪಡೆಯುವದಾಗಿ ಬರೆಯಲಾಗಿತ್ತು.
ಪತ್ರವನ್ನು ಓದಿದ ನಿರಾಶ್ರಿರಾದ ವಿನಿಶ ಮಾತನಾಡಿ, ಪ್ರವಾಹದಿಂದಾಗಿ ನಮ್ಮ ಮನೆಗಳು ಕುಸಿದಿದ್ದು, ಸರಕಾರ ಶಾಶ್ವತ ಸೂರು ಒದಗಿಸಬೇಕಿದೆ. ಆದರೇ ಪತ್ರದಲ್ಲಿ ನಾವೇ ಬರೆದುಕೊಡುವ ರೀತಿಯಲ್ಲಿ ಸರಕಾರದ ಜಾಗ ಪಡೆಯುವದಿಲ್ಲ ಎಂದು ಮುದ್ರಿಸಿದ್ದು, ನಮ್ಮ ಹಾದಿ ತಪ್ಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಗುಹ್ಯ ಕಂದಾಯ ಇಲಾಖೆ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗುಹ್ಯ, ಕಕ್ಕಟ್ಟುಕಾಡು, ಕೂಡುಗದ್ದೆಯ ನಿರಾಶ್ರಿತರು ಕಂದಾಯ ಇಲಾಖೆಯಿಂದ ನೀಡಲಾದ ಪತ್ರವನ್ನು ಹರಿದುಹಾಕಿದರು.