ಕೂಡಿಗೆ, ಸೆ. 29: ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಸರ್ವೆ ನಂಬರ್ 84/1 ರಲ್ಲಿ 3 ಎಕರೆ ಜಾಗವನ್ನು ನಿವೇಶನ ರಹಿತರಿಗೆ ನೀಡುವ ವಿಚಾರವಾಗಿ ಕಂದಾಯ ಇಲಾಖೆಯು ಸರ್ವೆ ಮಾಡಲಾಗಿತ್ತು. ಆದರೆ ಇದುವರೆಗೂ ಆ ಜಾಗದ ಹದ್ದುಬಸ್ತು ಮಾಡದಿರುವ ಬಗ್ಗೆ ಸಭೆÀಯಲ್ಲಿ ಚರ್ಚೆ ನಡೆಯಿತು.

ಆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮಸ್ಥರಿಗೆ ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದ ಕಾರಣ ನಿವೇಶನ ನಿರ್ಮಾಣ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆÀಯಲ್ಲಿ ಅನೇಕ ಬಾರಿ ಚರ್ಚಿಸಿ, ಕಂದಾಯ ಇಲಾಖೆಗೆ ಮಾಹಿತಿ ನೀಡಿದರೂ ಯಾವದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಸರ್ವ ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ಪ್ರತಿಭಟನೆ ಮಾಡುವ ಕುರಿತು ಸದಸ್ಯರುಗಳಾದ ದಿನೇಶ್, ವಿಜಯ, ಶಿವನಂಜಪ್ಪ, ಪದ್ಮ ಪ್ರಮೀಳಾ, ಅಶೋಕ, ಚೇತನ, ದೇವಮ್ಮ, ಸರೋಜಮ್ಮ ತೀರ್ಮಾನ ತೆಗೆದುಕೊಂಡರು. ಸಭೆಯಲ್ಲಿ 2 ವರ್ಷದ ಹಿಂದೆ ಆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರು ಆದ ಮನೆಗಳ ನಿರ್ಮಾಣದ ಹಣ ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಅಲ್ಲದೆ 2018-19ನೇ ಸಾಲಿನ ಮನೆಗಳು ಸಹ ಮಂಜೂರು ಆಗಿಲ್ಲಾ ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಚರ್ಚೆ ನಡೆಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಾತನಾಡಿ, ಈ ಎಲ್ಲಾ ವಿಚಾರಗಳನ್ನು ನೋಂದಣಿ ಮಾಡಲಾಗಿದೆ. ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಲಿಖಿತವಾಗಿ ಮಾಹಿತಿ ನೀಡಲಾಗುವದು. ಎಲ್ಲಾ ವಿಚಾರಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವದು ಎಂದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಕೇಶ್ ಸಭೆಗೆ ಬಂದ ಅರ್ಜಿಗಳ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.