ಮಡಿಕೇರಿ, ಸೆ. 29: ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸಧೃಡ ಕುಟುಂಬದವರು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು, ಈ ಬಗ್ಗೆ ದೂರುಗಳು ಕೂಡ ಬಂದಿದೆ.

ಸರ್ಕಾರವು 1 ಕೆ.ಜಿ. ಅಕ್ಕಿಯನ್ನು ಸುಮಾರು 28 ರಿಂದ 30 ರೂ.ಗೆ ಖರೀದಿಸಿ ಉಚಿತವಾಗಿ ಬಡ ಕುಟುಂಬಗಳಿಗೆ ನೀಡುತ್ತಿದ್ದು, ಈ ಯೋಜನೆಯಡಿ ಲಾಭವನ್ನು ಕೆಲವು ಸಧೃಡರು ಸುಳ್ಳು ಮಾಹಿತಿ ನೀಡಿ ಕಬಳಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಈ ವಂಚಕರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ. ಇಂತಹ ಅನರ್ಹ ಪಡಿತರ ಚೀಟಿದಾರರು ಅಕ್ಟೋಬರ್ 10 ರೊಳಗೆ ಉಪ ನಿರ್ದೇಶಕರ ಕಚೇರಿ ಅಥವಾ ಸಂಬಂಧಿಸಿದ ತಹಶೀಲ್ದಾರ್ ಕಚೇರಿಗೆ ಬಂದು ತಮ್ಮ ಪಡಿತರ ಚೀಟಿಯನ್ನು ಆದ್ಯರ್ಪಣೆ ಮಾಡಿ ಪಡಿತರ ಚೀಟಿ ವರ್ಗ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದೆ.

ಇಲ್ಲವಾದಲ್ಲಿ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿದಲ್ಲಿ ಪಡಿತರ ಚೀಟಿ ಪಡೆದ ದಿನದಿಂದ ಈವರೆಗೆ ಎಷ್ಟು ಪಡಿತರ ಪಡೆದಿದ್ದಾರೆ ಎಂಬದನ್ನು ಲೆಕ್ಕಾಚಾರ ಮಾಡಿ ದಂಡ ವಸೂಲಿ ಮಾಡುವದರ ಜೊತೆಗೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಅನರ್ಹರಿರುವ ಕುಟುಂಬಗಳು: ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು-ಮಂಡಳಿಗಳು, ನಿಗಮಗಳು, ಸ್ವಾಯತ್ತಾ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ 1000 ಚದರ ಅಡಿಗಳಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್ ಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬಗಳನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯ ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.