ಮಡಿಕೇರಿ, ಸೆ.29: ಮಡಿಕೇರಿ ದಸರೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಂತೆಯೇ, ನವರಾತ್ರಿ ಉತ್ಸವದ ಭಾಗವಾಗಿ ನಗರದಲ್ಲಿ ಕುಂಗ್ಫೂ (ವುಶು) ಸಮರ ಕಲೆಯ ಪ್ರದರ್ಶನ, ನೆರೆದವರ ಮೈರೋಮಾಂಚನಗೊಳಿಸಿತು. ನಗರ ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ ಮತ್ತು ಕೊಡಗು ಜಿಲ್ಲಾ ವುಶು ಸಂಸ್ಥೆ ಸಹಭಾಗಿತ್ವದಲ್ಲಿ ನಗರದ ಮೈತ್ರಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಉದ್ಘಾಟಿಸಿದರು. ವುಶು ಸಂಸ್ಥೆಯ ಜಿಲ್ಲಾಧ್ಯಕ್ಷ ಪಿ.ಕೆ. ರಮೇಶ್, ಕುಂಗ್ ಫೂ ಸಮರ ಕಲೆಯ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ರಾಷ್ಟ್ರೀಯ ವುಶು ಪಟುಗಳಾದ ಐಮನ್ ಮತ್ತು ಕಾರ್ತಿಕ್ ಮಧ್ಯೆ ಕುಂಗ್ಫೂ ಪ್ರದರ್ಶನ ಪಂದ್ಯ ನಡೆಯಿತು. ರಬ್ಬರ್ ನೆಲಹಾಸಿನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪರಸ್ಪರರು ವಿವಿಧ ತಂತ್ರಗಳಲ್ಲಿ ಸೆಣಸಿದರು.
ಈ ವೇಳೆ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿ.ನಾ.ಸೋಮೇಶ್, ವುಶು ತರಬೇತುದಾರ ನಿತಿನ್ ಸುವರ್ಣ ಮತ್ತಿತರರು ಹಾಜರಿದ್ದರು.