ಕಣಿವೆ, ಸೆ. 28: ರೈತರು ಕಳೆದ ಮುಂಗಾರಿನಲ್ಲಿ ಕೈಗೊಂಡಿದ್ದ ಜೋಳದ ಫಸಲನ್ನು ಕಟಾವು ಮಾಡಿದ್ದು, ಅದರ ಫಸಲನ್ನು ತೆಗೆಯುವದಕ್ಕಿಂತ ಮುನ್ನಾ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜೋಳದ ಫಸಲು ಹಾನಿಯಾಗುತ್ತಿದೆ.

ಮಳೆಯಿಂದ ರಕ್ಷಿಸಲು ಜೋಪಾನವಾಗಿರಿಸಿದ್ದ ಜಾಗದಲ್ಲಿ ಜೋಳದ ದಿಂಡಿನಲ್ಲಿಯೇ ಜೋಳದ ಕಾಳುಗಳಿಂದ ಮೊಳಕೆಯೊಡೆಯುತ್ತಿದೆ. ಮಳೆ ಬಿಡುವು ಕೊಡದೇ ಹೀಗೆಯೇ ಸುರಿದರೆ ಕೈಗೆ ಬಂದ ಫಸಲು ಬಾಯಿಗಿಲ್ಲವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದಾಗಿ ಬೆಳೆ ಬೆಳೆದ ಹೊಲ ಗದ್ದೆಗಳಿಗೆ ನೆರೆ ಬಂದು ಮುಕ್ಕಾಲು ಭಾಗ ಹಾನಿಯಾಗಿತ್ತು. ಈಗ ಅಳಿದುಳಿದ ಜೋಳದ ಫಸಲನ್ನು ನೆಮ್ಮದಿಯಿಂದ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ ಏನು ಮಾಡೋದು. ನಮ್ಮ ರೈತರ ಗೋಳು ಕೇಳುವವರಾರೆಂದು ರೈತ ಸುಂಕದಹಳ್ಳಿಯ ಚಂದ್ರಶೇಖರ್ ಸಂಕಟ ತೋಡಿಕೊಂಡಿದ್ದಾರೆ.