ಶ್ರೀಮಂಗಲ, ಸೆ. 27: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮರಣ ನಿಧಿ ಸದಸ್ಯತ್ವ ಪಡೆದ ಸದಸ್ಯರುಗಳಿಗೆ ರೂ. 50 ಸಾವಿರ ಮರಣ ನಿಧಿ ಪಾವತಿಸುವ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಘೋಷಿಸಿದರು. ಬಿರುನಾಣಿಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 50 ವರ್ಷಗಳಿಗೆ ಮೀರದ ಸದಸ್ಯರಿಗೆ ಮಾತ್ರ ಮರಣ ನಿಧಿ ಸದಸ್ಯತ್ವ ನೀಡುವದು ಹಾಗೂ ಹೊಸ ಮರಣ ನಿಧಿ ಯೋಜನೆಯಡಿ ರೂ. 15 ಸಾವಿರ ವಂತಿಕೆಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಸಂಘದಲ್ಲಿ 1492 ಸದಸ್ಯರಿದ್ದು, 2018-19 ನೇ ಸಾಲಿನಲ್ಲಿ ಸಂಘವು 12.32 ಲಕ್ಷ ಲಾಭಗಳಿಸಿದೆ. ಸಾಲ ಮರುಪಾವತಿಯಲ್ಲಿ ಶೇ. 100 ರಷ್ಟು ಸಾಧನೆ ಮಾಡಿದ್ದು, ಸಂಘದಿಂದ ಬೆಳೆ ಸಾಲ ಸೇರಿದಂತೆ ರೂ. 7.58 ಕೋಟಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಸಂಘದ ಅಭಿವೃದ್ಧಿಗೆ ಪ್ರತಿ ಸದಸ್ಯರು ಕೈ ಜೋಡಿಸಬೇಕು. ಸಂಘದಲ್ಲಿ ಸದಸ್ಯರು ವ್ಯವಹಾರ ಇಟ್ಟುಕೊಂಡು, ಠೇವಣಿ ಇಡುವ ಮೂಲಕ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಚಲನ್‍ಕುಮಾರ್ ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಗುಡ್ಡಮಾಡ ಸುಬ್ರಮಣಿ, ನಿರ್ದೇಶಕರುಗಳಾದ ಎ.ಯು. ಚಿಣ್ಣಪ್ಪ, ಬೊಳ್ಳೆರ ಕೆ. ಪೊನ್ನಪ್ಪ, ಎಂ.ಬಿ. ಮಂಜುನಾಥ್, ಬೊಟ್ಟಂಗಡ ಸಂಪತ್ತ್, ಎಂ.ಯು. ಸುಶೀಲ, ಅಮ್ಮತ್ತಿರ ರೇವತಿ ಪರಮೇಶ್ವರ, ಎ.ನ್. ಪುರುಷೋತ್ತಮ, ಪಿ.ಜಿ. ಶ್ರೀಹರಿ, ಹೆಚ್.ಟಿ. ಆನಂದ, ಜೆ.ಬಿ. ಬಸವ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಪಿ. ಭಾರತಿ ಹಾಜರಿದ್ದರು.