ಮಡಿಕೇರಿ, ಸೆ. 28: ಬಿಜೆಪಿಯ ಯುವ ಮುಖಂಡ ಸಂಪಾಜೆಯ ಬಾಲಚಂದ್ರ ಕಳಗಿ ಅವರ ಹತ್ಯೆಗೆ ಕಾರಣರಾದ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ, ಮತ್ತೆಂದೂ ಸಮಾಜ ಘಾತುಕ ಶಕ್ತಿಗಳು ತಲೆ ಎತ್ತದಂತೆ ಜನರಲ್ಲಿ ಅರಿವು ಮೂಡಿಸುವ ‘ಜನಜಾಗೃತಿ ಸಭೆ’ ತಾ.30 ರಂದು ಸಂಪಾಜೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾದ ಸುಬ್ರಹ್ಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಜಾಗೃತಿ ಸಮಿತಿಯ ಸಂಪಾಜೆ ವಲಯದಿಂದ ನಡೆಯುವ ಜನಜಾಗೃತಿ ಸಭೆಗೆ ಜಿಲ್ಲಾ ಬಿಜೆಪಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ ಎಂದು ಸ್ಪಷ್ಟಪಡಿಸಿ, ಅಂದು ಮಧ್ಯಾಹ್ನ 2 ಗಂಟೆಗೆ ಸಂಪಾಜೆ ಗೇಟ್ನಿಂದ ಜನಜಾಗೃತಿ ಸಭೆÉ ನಡೆಯಲಿರುವ ಕೊಯನಾಡು ಶ್ರೀ ಗಣೇಶ ಕಲಾಮಂದಿರದವರೆಗೆ ಬೃಹತ್ ಜಾಥಾ ನಡೆಯಲಿದೆ. ಬಳಿಕ ನಡೆಯುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ನಾಯಕರು, ವಿಶ್ವ ಹಿಂದೂ ಪರಿಷದ್ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸಂಪಾಜೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ, ಪಯಸ್ವಿನಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಅತ್ಯಂತ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಚಂದ್ರ ಕಳಗಿ ಅವರು ಪ್ರಸಕ್ತ ಸಾಲಿನ ಮಾರ್ಚ್ 19 ರಂದು ಹತ್ಯೆಗೊಳಗಾಗಿದ್ದರು. ಸಂಪಾಜೆ ವ್ಯಾಪ್ತಿಯಲ್ಲಿನ ಸಮಾಜ ವಿರೋಧಿ ಚಟುವಟಿಕೆÀಗಳನ್ನು ಹತ್ತಿಕ್ಕುವ ದೃಢ ನಿಲುವುಗಳನ್ನು ತಳೆದದ್ದೆ ಬಾಲಚಂದ್ರ ಕಳಗಿಯವರ ಹತ್ಯೆಗೆ ಕಾರಣವಾಯಿತೆಂದು ಅಭಿಪ್ರಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಬಾಲಚಂದ್ರ ಕಳಗಿ ಅವರು ಸಣ್ಣ ಪ್ರಾಯದಲ್ಲೆ ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ, ಉತ್ತಮ ಕಾರ್ಯನಿರ್ವಹಣೆಯ ಮೂಲಕ ಸಂಪಾಜೆ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿಯನ್ನಾಗಿ ರೂಪಿಸಲು ಮುಂದಾಗಿದ್ದ ಯುವ ಮುಂದಾಳುವಾಗಿದ್ದರು ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ಜಿಲ್ಲಾ ಕಾರ್ಯದರ್ಶಿ ಸತೀಶ್, ಸಂಪಾಜೆ ಗ್ರಾ.ಪಂ. ಅಧ್ಯಕ್ಷರಾದ ಕುಮಾರ್ ಚಿದ್ಕಾರ್ ಮತ್ತು ರಾಜಾರಾಮ್ ಕಳಗಿ ಸಂಪಾಜೆ ಉಪಸ್ಥಿತರಿದ್ದರು.