ಸಿದ್ದಾಪುರ, ಸೆ. 27: ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿದತ್ತ ಸಾಗುತ್ತಿದ್ದು, ಪ್ರಸಕ್ತ ವರ್ಷ ರೂ. 9 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು.
ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ 2018-19ನೇ ಸಾಲಿನ 89ನೇ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ 2,008 ಸದಸ್ಯರಿದ್ದು, ಅವರಿಂದ ಸಂಗ್ರಹಿಸಿದ ಪಾಲು ಹಣ ಇತರ ಪಾಲು ಹಣ ಸೇರಿ ಒಟ್ಟು ರೂ. 4,42,39,936 ಆಗಿರುತ್ತದೆ. 2018-19ನೇ ಸಾಲಿನಲ್ಲಿ ಸಂಘವು ರೂ. 90.28 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಶೇ. 35 ಲಾಭಾಂಶದ ಡಿವಿಡೆಂಟ್ ನೀಡಲು ಮಹಾಸಭೆ ತೀರ್ಮಾನಿಸಿದೆ ಎಂದರು. ಸಂಘವು ವರ್ಷದಿಂದ ವರ್ಷಕ್ಕೆ ದಾಪುಗಾಲು ಇಡುತ್ತಿದೆ ಎಂದರು. ರೂ. 158 ಕೋಟಿ ವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಆರ್ಥಿಕ ಪರಿಸ್ಥಿತಿ ಕೊಂಚ ಕಡಿಮೆಯಾಗಿದ್ದರೂ ಕೂಡಾ ಬ್ಯಾಂಕಿನಲ್ಲಿ ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು. ಸಂಘದ ನೂತನ ಕಟ್ಟಡದ ಯೋಜನೆಯು ತಾಂತ್ರಿಕ ವಿಚಾರದಿಂದಾಗಿ ವಿಳಂಬವಾಗಿದೆ. ಸಂಘದ ಜಾಗವು ಪರಿವರ್ತನೆ ಆದ ಕೂಡಲೇ ನೂತನ ಕಟ್ಟಡ ಪ್ರಾರಂಭಿಸಲಾಗುವದು ಎಂದರು. ಸಂಘಕ್ಕೆ ಸೇರಿದ ಸಿದ್ದಾಪುರದ ಎಂ.ಜಿ. ರಸ್ತೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಗೊಬ್ಬರದ ಗೋದಾಮನ್ನು ಸದ್ಯದಲ್ಲೇ ನಿರ್ಮಿಸಲಾಗುವದು ಎಂದರು. ಸಹಕಾರ ಸಂಘದ ಅಧೀನದಲ್ಲಿ ನಡೆಯುತ್ತಿರುವ ಬ್ಯಾಂಕ್, ಪೆಟ್ರೋಲ್ ಬಂಕ್ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿ, ಲಾಭ ದತ್ತ ಸಾಗುತ್ತಿದೆ ಎಂದರು.
ಸಾಲ ಪಡೆದುಕೊಂಡ ಸದಸ್ಯರುಗಳು ಸಕಾಲಕ್ಕೆ ಮರುಪಾವತಿ ಮಾಡಿ ಸಹಕರಿಸುವಂತೆ ಮನವಿ ಮಾಡಿದರು. ಸಿದ್ದಾಪುರದ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ಭಾಸ್ಕರ್ ಮಾತನಾಡಿ, ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘವು ಜಿಲ್ಲೆಯಲ್ಲೇ ಉತ್ತಮ ಸಂಘವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಡಿಸಿಸಿ ಬ್ಯಾಂಕಿನ ಮುಖಾಂತರ ಹೊಸ ಮನೆ ನಿರ್ಮಾಣಕ್ಕೆ ಹಾಗೂ ಆಸ್ತಿ ಖರೀದಿಗೆ ಸ್ವಸಹಾಯ ಸಂಘಗಳಿಗೆ ವಿವಿಧ ಬಡ್ಡಿ ರೂಪದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಸಾಲ ಸೌಲಭ್ಯಗಳನ್ನು ನೀಡಲಾಗುವದು ಎಂದರು.
ಅಲ್ಲದೆ ಬ್ಯಾಂಕಿನಲ್ಲಿ ವಿಮೆ ಸೌಲಭ್ಯ, ಕೇಂದ್ರ ಸರಕಾರದ ವಿವಿಧ ವಯಸ್ಸಿನ ಪಿಂಚಣಿ ಸೌಲಭ್ಯ, ನಿರುದ್ಯೋಗಿಗಳಿಗೆ ಪಿಂಚಣಿ, ಶಿಕ್ಷಣಕ್ಕೆ ಸಾಲ ಯೋಜನೆ ಸೇರಿದಂತೆ ವಿವಿಧ ಸಾಲಗಳ ಯೋಜನೆ ಮತ್ತು ಅದರ ಬಡ್ಡಿಗಳ ಮಾಹಿತಿ ತಿಳಿಸಿದರು. ಮಹಾ ಸಭೆಯ ಕಾರ್ಯಕ್ರಮದಲ್ಲಿ ಸಂಘದ ಬ್ಯಾಂಕಿನಲ್ಲಿ ಉತ್ತಮ ವ್ಯವಹಾರ ನಡೆಸಿದ ಕರಡಿಗೋಡಿನ ನಿವಾಸಿ ಗಳಾದ ಎಂ.ವಿ. ಸಜೀವನ್, ಕೆ.ಎ. ಸೋಮಣ್ಣ, ಗುಹ್ಯ ಗ್ರಾಮದ ಪಿ.ವಿ. ಮ್ಯಾಥ್ಯೂ, ಯುವ ಕೃಷಿಕರಾದ ಕುಕ್ಕುನೂರು ಹರೀಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಉತ್ತಮ ವ್ಯವಹಾರ ನಡೆಸಿ ಕರಡಿಗೋಡಿನ ಚೌಡೇಶ್ವರಿ, ಗುಹ್ಯದ ಸಂಗೀತ, ಸಿದ್ದಾಪುರದ ಶ್ರೀ ದೇವಿ ಸ್ವಸಹಾಯ ಸಂಘಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಂ. ಬಿಜೋಯ್, ನಿರ್ದೇಶಕರುಗಳಾದ ಕೆ.ಡಿ. ನಾಣಯ್ಯ, ಕೆ.ಜಿ. ಈರಪ್ಪ, ಕೆ.ಕೆ. ಚಂದ್ರ ಕುಮಾರ್, ಪಿ.ಕೆ. ಚಂದ್ರನ್, ಕೆ.ಎಸ್. ಸುನಿಲ್, ಎಂ.ಹೆಚ್. ಮೂಸಾ, ಎಂ.ಸಿ. ವಾಸು, ಹೆಚ್.ಕೆ. ಚೆಲುವಯ್ಯ, ಎಸ್.ಬಿ. ಪ್ರತೀಶ್, ಎಂ.ಪಿ. ಪ್ರಮೀಳ, ಎನ್.ಟಿ. ಪಾರ್ವತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಬಿ. ಪ್ರಸನ್ನ ಹಾಜರಿದ್ದರು.