ಕೂಡಿಗೆ, ಸೆ. 27: ಸೋಮವಾರಪೇಟೆಯ ಬಸವನಹಳ್ಳಿ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆಯು ಸಂಘದ ಎಸ್.ಎನ್.ರಾಜಾರಾವ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಕಳೆದ ವಾಸಿಕ ಸಭೆಯಲ್ಲಿ ಚರ್ಚಿಸಿದಂತೆ ಸಂಘಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಸಂಘದ ವತಿಯಿಂದ ಸರ್ಕಾರದ ಜವಳಿ ಖಾತೆಯ ಸಹಕಾರದೊಂದಿಗೆ ಜವಳಿ ಮತ್ತು ಸಿದ್ಧ ಉಡುಪು ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ರೂ. 20 ಲಕ್ಷ ಹಣ ಬಿಡುಗಡೆಗೊಂಡಿದ್ದು, ಮುಂದಿನ ಯೋಜನೆ ಮತ್ತು ಕಾಮಗಾರಿಯನ್ನು ಕೈಗೊಳ್ಳಲು ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರುಗಳು ಅನುಮೋದನೆ ನೀಡಿದರು. ಈ ಸಂದರ್ಭ 2018-29ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಮಂಡಿಸಿ ಸದಸ್ಯರ ಒಪ್ಪಿಗೆಯನ್ನು ಪಡೆಯಲಾಯಿತು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಮಾತನಾಡಿ, ಈಗಾಗಲೇ ಸದಸ್ಯರುಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಅದರಂತೆ ಆಡಳಿತ ಮಂಡಳಿ ಸಹಕಾರದೊಂದಿಗೆ ಬೃಹತ್ ಯೋಜನೆಗಳನ್ನು ಕೈಗೆತ್ತ್ತಿಕೊಳ್ಳಲಾಗುವದು. ಸಂಘದ ಕಟ್ಟಡದ ಸಮೀಪವಿರುವ ಜಾಗದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಘಟಕ ಸ್ಥಾಪನೆ ಮಾಡಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರೆತಿದ್ದು, ಸರ್ಕಾರದ 4.95 ಲಕ್ಷ ರೂಗಳ ಯೋಜನೆಯಾಗಿದೆ. ಈಗಾಗಲೇ 20 ಲಕ್ಷ ಬಿಡುಗಡೆಯಾಗಿರುವ ಹಿನ್ನಲೆ ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಸಹಕಾರ ಸಂಘದ ನಿಯಮದಡಿ ಪ್ರಾರಂಭಿಸಲಾಗುವುದು ಎಂದರು. ಅಲ್ಲದೇ ಹತ್ತು ಲಕ್ಷ ರೂ ವೆಚ್ಚದಲ್ಲಿ ಸಂಘದ ಕಟ್ಟಡದ ಮುಂಭಾಗದಲ್ಲಿರುವ ಜಾಗದಲ್ಲಿ ಮಸಾಲೆ ಪದಾರ್ಥಗಳ ಮಾರಾಟ ಮಳಿಗೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಒಂದು ಏಕರೆ ಪ್ರದೇಶದಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ಇದರ ನೀಲಿ ನಕ್ಷೆಯನ್ನು ಅನುದಾನಕ್ಕಾಗಿ ರಾಜ್ಯ ಸರ್ಕಾರದ ಗಿರಿಜನ ಮಹಾಮಂಡಳಿಗೆ ಕಳುಹಿಸಲಾಗಿದೆ. ಅನುಮೋದನೆ ದೊರೆತಲ್ಲಿ ಕಾಮಗಾರಿಯನ್ನು ಕಾರ್ಯಗತಗೊಳಿಸಲಾಗುವುದು. ಸಹಕಾರ ಸಂಘದ ಹೊಸ ತಿದ್ದು ಪಡಿ ಕಾಯ್ದೆಯನ್ವಯ ಮೂರು ವಾರ್ಷಿಕ ಸಭೆಗಳಿಗೆ ಸದಸ್ಯರುಗಳು ಮತದಾನದ ಹಕ್ಕನ್ನು ಕಾಯ್ದುಕೊಳ್ಳಬೇಕು ಎಂದು ವಿನಂತಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸಣ್ಣಯ್ಯ, ನಿರ್ದೇಶಕರಾದ ಸಿ.ಕೆ.ಉದಯ್ ಕುಮಾರ್, ಗಂಗಾಧರ್, ಬಿ.ಕೆ.ಮೋಹನ್, ಜೆ.ಟಿ.ಕಾಳಿಂಗ, ಸುಲೋಚನ, ಸವಿತಾ, ತಮ್ಮಯ್ಯ, ರಾಮನಾಥ ಸಿದ್ದಿ, ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಕಾರ ಸಂಘದ ಅಧಿಕಾರಿಗಳು ಉಪಸ್ಥಿತರಿದ್ದರು.