ಗೋಣಿಕೊಪ್ಪಲು, ಸೆ. 28: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವನ ಮೇಲೆ ಹಗೆ ಸಾಧಿಸಲು ಮುಂದಾದ ಹರಿಶ್ಚಂದ್ರಪುರದ ನಿವಾಸಿ ಮತ್ತೋರ್ವ ಆಟೋ ಚಾಲಕನಾಗಿರುವ ನದೀಂ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ಈತನ ಮೇಲೆ ಕೊಲೆ ಪ್ರಯತ್ನದಡಿ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ವರದಿಯಾಗಿದೆ.

ಶನಿವಾರ ಮುಂಜಾನೆ 7.30ರ ಸುಮಾರಿಗೆ ಚನ್ನಂಗೊಲ್ಲಿ ನಿವಾಸಿ ಎಲೆಕ್ಟ್ರೀಷಿಯನ್ ಹಾಗೂ ಆಟೋ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೈಜು ಎಂಬಾತ ಎಂದಿನಂತೆ ತನ್ನ ಆಟೋ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಗೋಣಿಕೊಪ್ಪ ನಗರಕ್ಕೆ ಬರುತ್ತಿದ್ದ ಸಂದರ್ಭ ಗೋಣಿಕೊಪ್ಪ ಚೆನ್ನಂಗೊಲ್ಲಿ ಮುಖ್ಯರಸ್ತೆಯಲ್ಲಿ ಹಿಂಬದಿಯಿಂದ ಅತೀ ವೇಗವಾಗಿ ತನ್ನ ಆಟೋ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಬಂದ ನದೀಂ ಎಂಬಾತ ಉದ್ದೇಶಪೂರ್ವಕವಾಗಿ ಬೈಜು ಚಲಾಯಿಸುತ್ತಿದ್ದ ಆಟೋಕ್ಕೆ ಅಡ್ಡಲಾಗಿ ಬರುವ ಮೂಲಕ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬೈಜುವಿನ ಆಟೋ ರಸ್ತೆಯಲ್ಲಿ ಮಗುಚಿಗೊಂಡಿದ್ದು ಚಾಲಕ ಬೈಜುವಿನ ಎಡ ಬಲ ಕೈಗಳಿಗೆ ತೀವ್ರ ಪೆಟ್ಟಾಗಿದ್ದು ತಲೆಗೆ ಗಾಯವಾಗಿದೆ. ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಯಾವದೇ ಪ್ರಯಾಣಿಕರು ಪ್ರಯಾಣಿಸುತ್ತಿರಲಿಲ್ಲ.

ಅನತಿ ದೂರದಲ್ಲಿದ್ದ ಗ್ರಾಮಸ್ಥರು ಕೂಡಲೇ ಸ್ಥಳಕ್ಕಾಗಮಿಸಿ ಆಟೋದಲ್ಲಿ ಸಿಲುಕಿಕೊಂಡಿದ್ದ ಬೈಜುವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಸುದ್ದಿ ತಿಳಿದ ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿದ್ದು ಬೈಜು ನೀಡಿದ ದೂರಿನ ಅನ್ವಯ ನದೀಂನನ್ನು ವಶಕ್ಕೆ ಪಡೆದಿದ್ದಾರೆ.

-ಹೆಚ್.ಕೆ. ಜಗದೀಶ್