ಮಡಿಕೇರಿ, ಸೆ. 26: ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಬೆಸೂರಿನ ಶಾಲಾ ಶಿಕ್ಷಕ ಸುರೇಶ್ ಮರಕಾಲ ಮತ್ತು ಮೂರ್ನಾಡಿನ ಕಾಲೇಜು ಉಪನ್ಯಾಸಕ ಎಸ್.ಡಿ. ಪ್ರಶಾಂತ್ ಅವರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನಿಂದ ಸನ್ಮಾನಿಸಲಾಯಿತು.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸುರೇಶ್ ಮರಕಾಲ ಮತ್ತು ಎಸ್.ಡಿ. ಪ್ರಶಾಂತ್ ಅವರನ್ನು ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಮರಕಾಲ, ತಾನು ಪಡೆದ ಪ್ರಶಸ್ತಿಯು ಬೆಸೂರು ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದಕ್ಕೆ ಅರ್ಪಣೆಯಾಗಬೇಕೆಂದು ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಕಾಲೇಜು ಉಪನ್ಯಾಸಕ ಎಸ್.ಡಿ. ಪ್ರಶಾಂತ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾನವೀಯ ಗುಣ ಮತ್ತು ತಾಳ್ಮೆ, ಸಮಯ ಪ್ರಜ್ಞೆ ಇಂದಿನ ಶಿಕ್ಷಕಕರಲ್ಲಿರಬೇಕಾದ ಮುಖ್ಯ ಅಂಶಗಳು ಎಂದರು. ಇತ್ತೀಚಿಗೆ ನಿಧನರಾದ ತನ್ನ ತಂದೆ ನಿವೃತ್ತ ಶಿಕ್ಷಕ ದಾಮೋದರ್ ಅವರಿಗೆ ಸನ್ಮಾನವನ್ನು ಸಮರ್ಪಿಸುವದಾಗಿ ಹೇಳಿದರು.

ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಸುರೇಶ್ ಮರಕಾಲ ಈ ಮೊದಲು ಪೊಲೀಸ್ ವೃತ್ತಿಯಲ್ಲಿದ್ದಾಗಲೂ ಶಿಸ್ತಿನ ಸಿಪಾಯಿಯಾಗಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ಅನುತ್ತೀರ್ಣನಾಗಿದ್ದರೂ ಶಿಕ್ಷಣ ಮುಂದುವರೆಸಿ ಇದೀಗ ಶಿಕ್ಷಕ ವೃತ್ತಿಯ 9ನೇ ವರ್ಷದಲ್ಲಿಯೇ ರಾಷ್ಟ್ರ ಪ್ರಶಸ್ತಿ ಗಳಿಸಿರುವದು ಅವರ ಛಲದ ಮನೋಭಾವಕ್ಕೆ ನಿದರ್ಶನ ಎಂದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ ಮಾತನಾಡಿ, ಶಾಲಾ ಶಿಕ್ಷಕರ ವೇತನ ಹೆಚ್ಚಿಸುವಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಬೇಕೆಂದು ಸಲಹೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್ ಶಿಕ್ಷಕರು ಸಮಾಜದಲ್ಲಿ ವಹಿಸಿರುವ ಪ್ರಾಮುಖ್ಯತೆಯನ್ನು ಶ್ಲಾಘಿಸಿದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್‍ಕುಮಾರ್ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ಗುಜರಾತ್‍ನ ಕಛ್‍ನಿಂದ ಬಂದಿದ್ದ ರೋಟರಿ ಸದಸ್ಯೆಯರಾದ ದರ್ಶನ್ ಶಾ, ಮೀನಾ ಶಾ ತಮ್ಮ ಕೊಡಗು ಪ್ರವಾಸದ ಅನುಭವ ಹಂಚಿಕೊಂಡರು. ರೋಟರಿ ಜಿಲ್ಲಾ ಸಮುದಾಯ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ವಿಜಯಲಕ್ಷ್ಮೀ ಚೇತನ್, ಪೂವಯ್ಯ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಮಡಿಕೇರಿ ಅಧ್ಯಕ್ಷ ರತನ್ ತಮ್ಮಯ್ಯ, ಲಯನ್ಸ್ ವಲಯಾಧ್ಯಕ್ಷ ದಾಮೋದರ್ ಹಾಜರಿದ್ದರು.