ಮಡಿಕೇರಿ, ಸೆ. 26: ಕಾಫಿ ಬೆಳೆಯುವ ಮಲೆನಾಡಿನ ಜಿಲ್ಲೆಗಳಲ್ಲಿ ಒಂದಾದ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡಗಳು, ಕಾಫಿ ತೋಟಗಳು, ಗದ್ದೆಗಳು ಮತ್ತು ಮನೆಗಳು ಹಾನಿಗೊಳಗಾಗಿ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇವರ ಕಷ್ಟಗಳಿಗೆ ಭಾಗಿಯಾಗುವ ದೃಷ್ಟಿಯಿಂದ ಸೋಮವಾರಪೇಟೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ತಂಡವು 20 ಜನ ಸಂತ್ರಸ್ತ ಬೆಳೆಗಾರರಿಗೆ ತಲಾ ಹತ್ತು ಸಾವಿರ ರೂ.ಗಳ ಸಹಾಯಧನವನ್ನು ವಿತರಿಸಲಾಯಿತು.

ಸೋಮವಾರಪೇಟೆ ತಾಲೂಕು ಸಂಘದ ವತಿಯಿಂದ 21 ಜನ ಸಂತ್ರಸ್ತರಿಗೆ ಹತ್ತು ಸಾವಿರ ಸಹಾಯಧನ ವಿತರಿಸಲಾಯಿತು. ಒಟ್ಟು 41 ಕುಟುಂಬಗಳಿಗೆ 4.10 ಲಕ್ಷ ಸಹಾಯಧನ ನೀಡಲಾಯಿತು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರು ಮಾತನಾಡಿ, ಕೆ.ಜಿ.ಎಫ್. ಸಂಘಟನೆಯು ಬೆಳೆಗಾರರ ಪರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಮಟ್ಟದಲ್ಲಿ ಪರಿಹಾರಕ್ಕಾಗಿ ಹೋರಾಟಗಳನ್ನು ನಡೆಸಲಾಗುತ್ತಿದೆ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಂ.ಎಂ. ತೀರ್ಥಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್. ಬಕ್ಕರವಳ್ಳಿ, ಉಪಾಧ್ಯಕ್ಷರುಗಳಾದ ನಂದಾ ಬೆಳ್ಯಪ್ಪ, ಡಿ.ಎಂ. ವಿಜಯ್, ಎನ್.ಬಿ. ಉದಯ್‍ಕುಮಾರ್, ಖಜಾಂಚಿ ಐ.ಎಂ. ಮಹೇಶ್‍ಗೌಡ, ಸಂಘಟನಾ ಕಾರ್ಯದರ್ಶಿ ಹೆಚ್.ಪಿ. ರೇವಣ್ಣಗೌಡ, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹಾಗೂ ಸಿ.ಎಸ್. ಮಹೇಶ್, ಕೆ.ಎಸ್. ನಾರಾಯಣಗೌಡ, ಹೆಚ್.ವಿ. ಮಂಜುನಾಥ್ ಇತರರು ಇದ್ದರು.