ಮಡಿಕೇರಿ, ಸೆ. 26: ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊಡವ ಹಾಗೂ ಗೌಡ ಜನಾಂಗದ ನಡುವೆ ವಿವಿಧ ಕಾರಣಗಳಿಂದ ದ್ವೇಷ ಭಾವನೆ ಮೂಡದಂತೆ ಹಾಗೂ ಮುಂದಿನ ದಿನಗಳಲ್ಲಿ ಯಾವದೇ ತಪ್ಪುಗಳು ಮರುಕಳಿಸದಂತೆ ಎರಡು ಜನಾಂಗದ ಹಿರಿಯರು ಸೇರಿ ಸಾಮರಸ್ಯ ಮೂಡಿಸುವಂತಾಗಬೇಕು ಎಂದು ಕೊಡಗು ಗೌಡ ಯುವ ವೇದಿಕೆ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಹಾಗೂ ಕಾರ್ಯದರ್ಶಿ ಕಟ್ಟೆಮನೆ ರೋಷನ್ ಅವರುಗಳು ಈ ಬಗ್ಗೆ ಪ್ರಸ್ತಾಪಿಸಿದ್ದು, ಪ್ರಸ್ತುತ ಉಂಟಾಗಿರುವ ಪ್ರಕರಣಗಳನ್ನು ಪ್ರೀತಿ-ವಿಶ್ವಾಸದಿಂದ ಮುಗಿಸಬೇಕೆಂದು ಹೇಳಿದ್ದು, ಇದು ಜಿಲ್ಲೆಯ ಎಲ್ಲಾ ಜಾತಿ-ಬಾಂಧವರಿಗೆ ಮಾದರಿಯಾಗಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

‘ಕೊಡವ ಜನಾಂಗದ ವಿರುದ್ಧ ಅವಹೇಳನೆ ಎಸ್‍ಪಿಗೆ ದೂರು’ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕೊಡವ ಜನಾಂಗದ ಹಾಗೂ ಗೌಡ ಜನಾಂಗದ ಕೆಲವು ಯುವಕರುಗಳು ಜನಾಂಗದ ವೇಷಭೂಷಣ ಹಾಗೂ ಮೂಲ ಚರಿತ್ರೆಯ ಕುರಿತಾಗಿ ಉತ್ತರ-ಪ್ರತ್ಯುತ್ತರಗಳನ್ನು ಕೊಟ್ಟಿರುವದನ್ನು ಎಲ್ಲರು ಗಮನಿಸಿರುವದಾಗಿದೆ.

ಆದರೆ ತಾ. 23 ರಂದು ಎಸ್‍ಪಿಗೆ ದೂರು ನೀಡುವ ಸಮಯದಲ್ಲಿ ಗೌಡ ಜನಾಂಗದ ಒಬ್ಬ ಯುವಕನ ವಿರುದ್ಧ ಮಾತ್ರ ದೂರು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಉಭಯ ಜನಾಂಗದ ಯುವಕರುಗಳು ಕೂಡ ಅವಹೇಳನ ಕಾರಿಯಾಗಿ ನಿಂದಿಸಿಕೊಂಡು ಉತ್ತರ-ಪ್ರತ್ಯುತ್ತರ ನೀಡಿರುವದಾಗಿದೆ.

ಹೀಗಿರುವಾಗ ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾದ ಗೌಡ ಹಾಗೂ ಕೊಡವ ಜನಾಂಗದ ಯುವಕರುಗಳು ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (ಫೇಸ್ ಬುಕ್ ಮತ್ತು ವಾಟ್ಸ್‍ಪ್ ಗ್ರೂಪ್)ಗಳಲ್ಲಿ ಒಂದು ಜನಾಂಗದ ವಿರುದ್ಧ ಯಾವದೇ ಅವಹೇಳನಕಾರಿ ಶಬ್ಧವನ್ನು ಹಾಗೂ ಅನಾದಿ ಕಾಲದಿಂದಲೂ ರೂಪಿಸಿಕೊಂಡು ಬಂದಂತಹ, ವೇಷಭೂಷಣದ ಚಾರಿತ್ರ್ಯವನ್ನು ಮತ್ತು ಎರಡು ಜನಾಂಗದವರ ನಡುವೆ ಯಾವದೇ ರೀತಿಯ ದ್ವೇಷ ಭಾವನೆ ಮೂಡದಂತೆ ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯಾದ ತಪ್ಪುಗಳು ಮರುಕಳಿಸದಂತೆ ಎರಡು ಜನಾಂಗದವರ ಹಿರಿಯರುಗಳು ಸೇರಿ ಈ ಒಂದು ವಿಚಾರವನ್ನು ಪ್ರೀತಿ-ವಿಶ್ವಾಸದಿಂದ ಇಲ್ಲಿಗೆ ಮುಕ್ತಾಯ ಗೊಳಿಸುವ ಮೂಲಕ ಅಣ್ಣ-ತಮ್ಮಂದಿರಂತೆ ಜಿಲ್ಲೆಯ ಎಲ್ಲಾ ಜಾತಿ-ಬಾಂಧವರುಗಳಿಗೆ ಒಂದಾಗಿ ಮಾದರಿಯಾಗಬೇಕು ಎಂದು ಕೊಡಗು ಗೌಡ ಯುವ ವೇದಿಕೆ ಮನವಿ ಮಾಡುವದಾಗಿ ಹೇಳಿದ್ದಾರೆ.