ಶನಿವಾರಸಂತೆ, ಸೆ. 26: ಆರೋಗ್ಯವಂತ ಮಗು ದೇಶದ ಆಸ್ತಿ. ತಾಯಿ-ಮಗುವಿನ ಭವಿಷ್ಯದ ಆರೋಗ್ಯಪೂರ್ಣ ಜೀವನಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅತ್ಯವಶ್ಯಕ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಅಭಿಪ್ರಾಯಪಟ್ಟರು.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಪ್ರಯುಕ್ತ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿವರ್ಷ ಸೆಪ್ಟೆಂಬರ್ ತಿಂಗಳನ್ನು ಪೌಷ್ಟಿಕ ಆಹಾರ ಮಾಸಾಚರಣೆ ಎಂದು ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 6 ತಿಂಗಳ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಯಿತು. ಗರ್ಭಿಣಿ ಮಹಿಳೆ ಅಝಮೀನ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಆರೋಗ್ಯವಂತ ಶಿಶು ಸ್ಪರ್ಧೆ, ಪುಟ್ಟ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಹಾಗೂ ಗ್ರಾಮಸ್ಥರಿಗೆ ಪೌಷ್ಟಿಕ ತಿನಿಸುಗಳ ತಯಾರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪಂಚಾಯಿತಿ ಸದಸ್ಯೆ ಕಮಲಮ್ಮ, ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆಯರಾದ ಸವಿತಾ, ಲಕ್ಷೀ, ಶುಭಾ, ಪುಷ್ಪಾ, ಶ್ರೀಮತಿ ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು.