*ಸಿದ್ದಾಪುರ, ಸೆ. 26: ಸಮೀಪದ ಒಂಟಿಯಂಗಡಿಯ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಇಂದು ಸಂಘದ ಸಭಾಭವನದಲ್ಲಿ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿ ಕೆಲವೇ ಕ್ಷಣಗಳಲ್ಲಿ ಸಭೆಯು ಬರಖಾಸ್ತುಗೊಂಡ ಘಟನೆ ನಡೆದಿದೆ.
ತಾ. 15 ರಂದು ಸಹಕಾರ ಸಂಘವು ವಾರ್ಷಿಕ ಮಹಾ ಸಭೆಯನ್ನು ಆಯೋಜಿಸಿತ್ತಾದರೂ ಲೆಕ್ಕ ಪರಿಶೋಧನಾ ವರದಿ ಬಾರದ ಕಾರಣ ಸಭೆಯನ್ನು ಮುಂದೂಡಿತ್ತು. ಇಂದು ನಡೆದ ಸಭೆಯಲ್ಲಿ 1428 ಸದಸ್ಯರುಗಳಲ್ಲಿ 766 ಮಂದಿ ಸದಸ್ಯರು ಪಾಲ್ಗೊಂಡಿದ್ದರು.
ಸಂಘದ ಸಭೆಯು ಪ್ರಾರಂಭವಾಗುತ್ತಿದಂತೆ ಅಧ್ಯಕ್ಷರು 2017-18 ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ಅಂಗೀಕರಿಸಲು ಸಭೆಯ ಮುಂದಿಟ್ಟಾಗ ಸಂಘದ ಸದಸ್ಯರಾದ ಕೆ.ಎಸ್.,ಗೋಪಾಲಕೃಷ್ಣ ಹಾಗೂ ಎಂ.ಎ ಸುಬ್ಬಯ್ಯ ಮೊದಲಿಗೆ ಕ್ರಿಮಿನಾಶಕ ಮಾರಾಟ ಮಾಡಲು ಕೃಷಿ ಇಲಾಖೆಯಿಂದ ತರಬೇತಿ ಪಡೆದ ಸಿಬ್ಬಂದಿಗಳು ಮಾತ್ರ ಮಾರಾಟ ಮಾಡಲು ಅನುಮತಿಇದ್ದು ತರಬೇತಿ ಪಡೆದ ಸಿಬ್ಬಂದಿಗಳು ಸಂಘದಲ್ಲಿ ಲಭ್ಯ ಇಲ್ಲದಿರುವುದರಿಂದ ಪರವಾನಗಿ ಪಡೆಯಲು ಸಾಧ್ಯವಿಲ್ಲದಾಯಿತು. ಈ ಬಗ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಮಹಾ ಸಭೆಗೆ ಸಮಜಾಯಿಸಿಕೆ ನೀಡಬೇಕು ಎಂದು ಕೋರಿದರು.
ಬಳಿಕ ಸಂಘದ ಸದಸ್ಯರಾದ ಗೋಪಾಲ ಕೃಷ್ಣ, ಅಮ್ಮತಿ ಡಿಸಿಸಿ ಬ್ಯಾಂಕ್ ಚಾಲ್ತಿ ಖಾತೆ-5ರಲ್ಲಿ 2018 ಮಾರ್ಚ್ 23 ರಂದು ಹತ್ತು ಲಕ್ಷ ವ್ಯತ್ಯಾಸವಿದ್ದು ಇದರ ಬಗ್ಗೆ ಹಿಂದಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರ ಇಲ್ಲದೇ ಇರುವದರಿಂದ ಹಿಂದಿನ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಇತರೆ ಸದಸ್ಯರ ಗಮನಕ್ಕೆ ತರಲಾಯಿತ್ತು. ಈ ಬಗ್ಗೆ ಸದಸ್ಯರಾದ ವಿ.ಕೆ. ದೇವಲಿಂಗಯ್ಯ, ಎಂ.ಎ. ಸುಬ್ಬಯ್ಯ, ಎಂ.ಬಿ. ತಿಮ್ಮಯ್ಯ, ವಿ.ಎಸ್. ತಿಮ್ಮಯ್ಯ, ಡಿ.ಎಂ. ತಿಮ್ಮಯ್ಯ, ಕೆ.ಸಿ. ಸುಬ್ಬಯ್ಯ ಹಾಗೂ ಇತರರು ಚರ್ಚೆ ನಡೆಸಿ ಡಿಸಿಸಿ ಬ್ಯಾಂಕ್ ಚಾಲ್ತಿ ಖಾತೆಯಲ್ಲಿ ಆಗಿರುವ ವ್ಯತ್ಯಾಸ ಮತ್ತು ಕೆ.ಸಿ ದೇವಯ್ಯ ಅವರ ಉಳಿತಾಯ ಖಾತೆಯಲ್ಲಿ ಆಗಿರುವ ದುರುಪಯೋಗದ ಬಗ್ಗೆ ಆಡಳಿತ ಮಂಡಳಿ ತಪಿತಸ್ಥರ ಮೇಲೆ ಕ್ರಮಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು. ಡಿಸಿಸಿ ಬ್ಯಾಂಕ್ ಖಾತೆಗೆ ಹಣ ಹಾಕುವದಾಗಿ ಸ್ಥಳೀಯ ವಿಜಯಾ ಬ್ಯಾಂಕಿನಿಂದ ಹತ್ತು ಲಕ್ಷ ಮೊತ್ತದ ಹಣವನ್ನು ಡ್ರಾ ಮಾಡಿದ್ದರೂ ಅದೇ ದಿನ ಎಂ.ಕೆ. ಬೋಪಯ್ಯ ಎಂಬವರ ಖಾತೆಗೆ ಮೂವತ್ತು ಸಾವಿರ ಚೆಕ್ ಬರೆದು ಅವರ ಖಾತೆಗೆ 30 ಸಾವಿರ ಹಣ ಜಮೆಯಾಗಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಸದಸ್ಯರು ವಾದಿಸಿದರು.
ಸಂಘಕ್ಕೆ ಬಡ್ಡಿ ನಷ್ಟ ಸುಮಾರು 74 ಸಾವಿರ ಕಂಡು ಬಂದಿದ್ದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸದಸ್ಯರು ಕಳೆದ 10 ವರ್ಷದಿಂದ ಸಂಘದಲ್ಲಿ ಉಂಟಾಗಿರುವ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆ ನಡೆಸ ಬೇಕು ಎಂದು ಒತ್ತಾಯಿಸಿ ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಹಾಸಭೆ ಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 2017-18 ನೇ ಸಾಲಿನಲ್ಲಿ ಸಂಘ ನಡೆಸಿದ ವ್ಯವಹಾರ ಮತ್ತು ಲೆಕ್ಕ ಪರಿಶೋಧನೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಅಲ್ಲದೇ ಪ್ರಸಕ್ತ ವರ್ಷ 4 ಲಕ್ಷ ನಷ್ಟ ಕಂಡು ಬಂದಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಸಭೆಯನ್ನು ಬರಖಾಸ್ತು ಗೊಳಿಸಿದರು.
ಸಭೆಯಲ್ಲಿ ಬ್ಯಾಂಕ್ ಮೇಲ್ವಿಚಾರಕ ಶಂಕರ್ ಉಪಸ್ಥಿತರಿದ್ದರು.
-ಅಂಚೆಮನೆ ಸುಧಿ