ಮಡಿಕೇರಿ, ಸೆ. 25: ಅತಿವೃಷ್ಟಿ ., ಪ್ರವಾಹ., ಭೂಕುಸಿತಗಳಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೂಡ ನೆಲಕಚ್ಚಿದೆ. ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಪ್ರಮುಖ ಅರ್ಧ ಆದಾಯದ ಮೂಲವಾಗಿರುವ ಕಾಫಿ ಕೃಷಿ ಬೆಲೆ - ಬೆಳೆ ಕುಸಿತದಿಂದ ಸಂಕಷ್ಟದ ಹಾದಿಯಲ್ಲಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಯೊಂದಿಗೆ ಹೋಂ ಸ್ಟೇಗಳ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಮುಂದಾಗಿರುವ ಇಲ್ಲಿನ ಜನತೆಗೆ ಪ್ರವಾಸೋದ್ಯಮದ ಹಿನ್ನಡೆಯಿಂದಾಗಿ ಮತ್ತಷ್ಟು ದುಸ್ತರ ಪರಿಸ್ಥಿತಿ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮೂಲಕ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲು ಮುಂದಾಗಿದೆ.
‘ಪ್ರವಾಸೋದ್ಯಮ ಹಾಗೂ ಉದ್ಯೋಗ : ಸರ್ವರಿಗೂ ಉಜ್ವಲ ಭವಿಷ್ಯ’ ಎಂದ ಸಂದೇಶದೊಂದಿಗೆ ಪ್ರವಾಸೋದ್ಯಮವನ್ನು ಪುನಶ್ಚೇತನ ಗೊಳಿಸಲು, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾ. 27 ರಂದು ಕಾರ್ಯಕ್ರಮ ಆಯೋಜನೆಗೊಂಡಿದೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಶನ್, ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಶನ್, ಕೊಡಗು ಜಿಲ್ಲಾ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಶನ್, ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಶನ್, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರವಾಸೋದ್ಯಮ ವಿಭಾಗದವರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.
ಮ್ಯಾರಥಾನ್ - ಸೈಕ್ಲಿಂಗ್
ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಶನ್,
(ಮೊದಲ ಪುಟದಿಂದ) ಗ್ರೀನ್ ಸಿಟಿ ಫೋರಂ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರವಾಸೋದ್ಯಮ ವಿಭಾಗದ ಸಹಯೋಗದಲ್ಲಿ ಮ್ಯಾರಥಾನ್, ಸೈಕ್ಲಿಂಗ್ ಜಾಥಾ ಹೊರಡಲಿದೆ. ತಾ. 27 ರಂದು ಬೆಳಿಗ್ಗೆ 7 ಗಂಟೆಗೆ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಜಾಥಾ ಆರಂಭಗೊಳ್ಳಲಿದೆ. ಇದರೊಂದಿಗೆ ದ್ವಿಚಕ್ರ ವಾಹನಗಳೂ ಕೂಡ ಪಾಲ್ಗೊಳ್ಳಲಿವೆ. ವೃತ್ತದಿಂದ ಹೊರಟು ರಾಜಾಸೀಟ್ ಮೂಲಕ ನೂತನ ಖಾಸಗಿ ಬಸ್ ನಿಲ್ದಾಣಕ್ಕಾಗಿ ಹಾದು ಕೈಗಾರಿಕಾ ಬಡಾವಣೆಯಿಂದ ಹಳೆ ಖಾಸಗಿ ಬಸ್ ನಿಲ್ದಾಣಕ್ಕಾಗಿ ಸಾಗಿ ಕೋಟೆ ಆವರಣದಲ್ಲಿ ಅಂತ್ಯಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ 200ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ, ವಿವಿಧ ಶಾಲಾ - ಕಾಲೇಜು ಮಕ್ಕಳು, ಸಾರ್ವಜನಿಕರು, ಸಂಘ ಸಂಸ್ಥೆಯವರು ಪಾಲ್ಗೊಳ್ಳಲಿದ್ದಾರೆ ಎಂದು ಟೂರ್ಸ್ - ಟ್ರಾವೆಲ್ಸ್ನ ಅಧ್ಯಕ್ಷ ಚೆಯ್ಯಂಡ ಸತ್ಯಗಣಪತಿ ತಿಳಿಸಿದ್ದಾರೆ. ಮ್ಯಾರಥಾನ್ನಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಗುವದೆಂದು ಅವರು ತಿಳಿಸಿದ್ದಾರೆ.
ಕೋಟೆಯಲ್ಲಿ ಶ್ರಮದಾನ
ಮ್ಯಾರಥಾನ್ ಮುಗಿದ ಬಳಿಕ ಕೋಟೆ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗವದು. ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡಿರುವದಾಗಿ ಸತ್ಯ ಹೇಳಿದರು. ಅಲ್ಲಿಯೇ ಬೆಳಗ್ಗಿನ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಛಾಯಾಚಿತ್ರ ಪ್ರದರ್ಶನ
ಪ್ರವಾಸೋದ್ಯಮ ಹಾಗೂ ಪ್ರಕೃತಿ - ಪರಿಸರದ ಸ್ವಾದವನ್ನು ಉಣಬಡಿಸುವ ಸಲುವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಫೀ.ಮಾ. ಕಾರ್ಯಪ್ಪ ಕಾಲೇಜು ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಛಾಯಾಚಿತ್ರಗಾರರು, ಪತ್ರಕರ್ತರು, ಸಾರ್ವಜನಿಕರು, ಹವ್ಯಾಸಿಗರು ತೆಗೆದಂತಹ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವದು. ‘ಪ್ರಕೃತಿ ಮತ್ತು ಪ್ರವಾಸೋದ್ಯಮ’ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿತವಾಗಿದ್ದು, ಹೋಂ ಸ್ಟೇ ಅಸೋಸಿಯೇಶನ್ ಇದರ ಜವಾಬ್ದಾರಿ ನಿರ್ವಹಿಸಲಿದೆ. ಈಗಾಗಲೇ 100ಕ್ಕೂ ಅಧಿಕ ಛಾಯಾಚಿತ್ರಗಳು ಪ್ರದರ್ಶನಕ್ಕೆ ಬಂದಿದ್ದು, ಎಲ್ಲಾ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ತಿಳಿಸಿದ್ದಾರೆ.
ದುಬಾರೆಯಲ್ಲಿ ಬೋಟಿಂಗ್
ಈ ಒಂದು ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳಿಗೂ ಏನಾದರೂ ಲವಲವಿಕೆಯಿರಲಿ ಎಂಬ ಉದ್ದೇಶದೊಂದಿಗೆ ಅವರುಗಳಿಗೆ ಪ್ರವಾಸಿ ತಾಣ ದುಬಾರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ಮೂಲಕ ಈ ಕಾರ್ಯಕ್ರಮ ನಡೆಯಲಿದ್ದು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆ ಸುಂಟಿಕೊಪ್ಪದ ಸ್ವಸ್ಥ, ಪಾಲಿಬೆಟ್ಟದ ಚೆಶೈರ್ ಹೋಂ ಸೇರಿದಂತೆ ಒಟ್ಟು 85 ಮಕ್ಕಳಿಗೆ ದೋಣಿಯಲ್ಲಿ ವಿಹರಿಸಲು ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಸಾಂಸ್ಕøತಿಕ ಕಲರವ
ವಿವಿಧ ಚಟುವಟಿಕೆಗಳೊಂದಿಗೆ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸಮಾರಂಭ ಜರುಗುವ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ವಾರ್ತಾ ಇಲಾಖೆ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಾಟಕ ಮೂಡಿ ಬರಲಿದೆ. ನಂತರ ಸಂಜೆ 5.30 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಜಾಸೀಟು ಆವರಣದಲ್ಲಿ ಡೊಳ್ಳುಕುಣಿತ ಹಾಗೂ ಕಂಸಾಳೆ ಪ್ರದರ್ಶನ ನಡೆಯಲಿದೆ.
ಸಮಾರಂಭ
ಬೆಳಿಗ್ಗೆ 10.30 ಗಂಟೆಗೆ ಫೀ.ಮಾ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎ. ಸೋಮಣ್ಣ ಸಮಾರಂಭ ಉದ್ಘಾಟಿಸುವರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಹೊಟೇಲ್ ಮತ್ತು ರೆಸಾಟ್ರ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಎನ್. ಪ್ರಕಾಶ್, ಹೋಂ ಸ್ಟೇ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಟೂರ್ಸ್ ಅಂಡ್ ಟ್ರಾವೆಲ್ಸ್ ಅಧ್ಯಕ್ಷ ಚೆಯ್ಯಂಡ ಸತ್ಯ, ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಲ್. ವಿಶ್ವ ಅವರುಗಳು ಪಾಲ್ಗೊಳ್ಳಲಿದ್ದಾರೆ.
- ಕುಡೆಕಲ್ ಸಂತೋಷ್