ಮಡಿಕೇರಿ, ಸೆ. 25: ಮಡಿಕೇರಿ ದಸರಾ ನಾಡ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿರುವ ಭರವಸೆಯಂತೆ ರೂ. 1 ಕೋಟಿ ಹಣ ಕಲ್ಪಿಸಿದೆ. ಕರ್ನಾಟಕ ಮತ್ತು ಸಂಸ್ಕøತಿ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರ ಬಿದ್ದಿದ್ದು, ಪತ್ರ ತಮ್ಮ ಕೈ ಸೇರಿದೆ ಎಂದು ದಸರಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಖಚಿತಪಡಿಸಿದ್ದಾರೆ.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಈ ಬಗ್ಗೆ ಹೊರಡಿಸಿರುವ ಆದೇಶದಲ್ಲಿ ದಸರಾ ಸಮಿತಿಯ ಅಧ್ಯಕ್ಷರು ಆಗಿರುವ ಕೊಡಗು ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಯಂತೆ ಷರತ್ತುಗಳಿಗೆ ಒಳಪಟ್ಟು ಹಣವನ್ನು ಬಿಡುಗಡೆಯೊಂದಿಗೆ, ಯಾವ ಉದ್ದೇಶಕ್ಕಾಗಿ ಹಣ ಮಂಜೂರಾತಿ ಮಾಡಲಾಗಿದೆಯೋ, ಆ ಉದ್ದೇಶಕ್ಕೆ ಬಳಸುವಂತೆ ಮತ್ತು ಬಿಡುಗಡೆಯಾಗುವ ಹಣಕ್ಕೆ ಲೆಕ್ಕ ಪರಿಶೋಧಕರಿಂದ ಅಗತ್ಯ ದೃಢೀಕರಣ ಸಹಿತ ಖರ್ಚು ವೆಚ್ಚದ ಮಾಹಿತಿ ಒದಗಿಸಲು ನಿರ್ದೇಶಿಸಿದೆ.ಅಲ್ಲದೆ ರೂ. 1 ಕೋಟಿ ಹಣದ ಮೊತ್ತವನ್ನು ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ಡಿಡಿಓ ಕೋಡ್‍ಗೆ ಅಪ್ ಲೋಡ್ ಮಾಡಿರುವದಾಗಿ ಇಲಾಖೆ ಪ್ರಕಟಿಸಿದೆ.

ರಾಬೀನ್ ಹೇಳಿಕೆ: ಜಿಲ್ಲೆಯ ಶಾಸಕರುಗಳು, ಮೇಲ್ಮನೆ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ಸಿ.ಟಿ. ರವಿ ಅವರುಗಳ ಸಹಕಾರದಿಂದ ರೂ. 1 ಕೋಟಿ ಲಭಿಸಿರುವದಾಗಿ ದಸರಾ ಸಮಿತಿ ಕಾಯಾಧ್ಯಕ್ಷ ರಾಬೀನ್ ದೇವಯ್ಯ ಪ್ರತಿಕ್ರಿಯಿಸಿದ್ದಾರೆ.