ಸೋಮವಾರಪೇಟೆ, ಸೆ. 24: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19ನೇ ಸಾಲಿನಲ್ಲಿ ರೂ. 68.31 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಭರತ್ಕುಮಾರ್ ಹೇಳಿದರು.
ಗೌಡಳ್ಳಿಯ ಬಿ.ಜಿ.ಎಸ್. ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ. 20 ರ ಡಿವಿಡೆಂಡ್ ನೀಡಲಾಗುವದು ಎಂದರು. ಕೃಷಿಕರ ಮಿತ್ರ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸದಸ್ಯರು ಮುಂದಾಗಬೇಕು. ಕಷ್ಟದ ದಿನಗಳಲ್ಲಿ ರೈತರಿಗೆ ಸಹಾಯಕ್ಕೆ ಬರುವದೇ ಸಹಕಾರಿ ಸಂಘಗಳು ಎಂದ ಅವರು, ಡಿ.ಸಿ.ಸಿ. ಬ್ಯಾಂಕ್ನಿಂದ ಅನುಮತಿ ಪಡೆದು ಚಿನ್ನದ ಸಾಲ ನೀಡಲಾಗುವದು. ಸ್ತ್ರೀಶಕ್ತಿ ಸಂಘಗಳಿಗೆ ರೂ. 5 ಲಕ್ಷ ಬಡ್ಡಿ ರಹಿತ ಸಾಲ ವಿತರಿಸಲಾಗುವದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕರುಗಳಾದ ಸಿ.ಎ. ಮಮತ, ಸಿ. ಪವಿತ್ರ, ಕೆ.ಟಿ. ಕಾವೇರಿ, ಎಂ.ಜೆ. ಜಯಪ್ರಕಾಶ್, ಎಸ್.ಎ. ಸುರೇಶ್, ಜಿ.ಎ. ಮಹೇಶ್, ಜಿ.ಪಿ. ಸುನೀಲ್ಕುಮಾರ್, ಎಸ್.ಟಿ. ಕೃಷ್ಣ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೆ. ಶಿವಪ್ರಕಾಶ್ ಉಪಸ್ಥಿತರಿದ್ದರು.