ವೀರಾಜಪೇಟೆ, ಸೆ. 24: ಸಮಾಜದಲ್ಲಿ ಸಂಪತ್ತಿನ ಸೃಷ್ಟಿ ಕರ್ತರಾದ ಕಾರ್ಮಿಕರ ಉದ್ದಾರ ವಾಗದೆ ದೇಶದ ಅಭಿವೃದ್ಧಿ ಅಸಾಧ್ಯ. ದೇಶವನ್ನಾಳುವ ಸರಕಾರಗಳು ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡುವದರ ಬದಲು ಬಂಡವಾಳ ಶಾಹಿಗಳ ಹಿತವನ್ನು ಕಾಪಾಡಿ ಸಂಪತ್ತನ್ನು ಹೆಚ್ಚಿಸಿ ಕೊಳ್ಳುವದರಲ್ಲಿ ನಿರತವಾಗಿವೆ. ಜಾಗತಿಕ ಬಂಡವಾಳ ಶಾಹಿಗಳು ದೇಶದ ಕಾರ್ಮಿಕ ವರ್ಗವನ್ನು ಶೋಷಿಸುವ ದಮನಕಾರಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಕಾರ್ಮಿಕರ ಶೋಷಣೆಯ ವಿರುದ್ಧ ದೇಶದಾದ್ಯಂತ ಕಾರ್ಮಿಕರು ಸಮರ ಶೀಲ ಹೋರಾಟ ನಡೆಸುವದು ಅಗತ್ಯ ಎಂದು ಸಿ.ಐ.ಟಿ.ಯು. ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಮಹಂತೇಶ್ ಹೇಳಿದರು.

ಸಿ.ಐ.ಟಿ.ಯು ಜಿಲ್ಲಾ ಶಾಖೆಯ ವತಿಯಿಂದ ಇಲ್ಲಿನ ಗೋಣಿಕೊಪ್ಪಲಿನ ಹಳೆ ಗೋಲ್ಡ್ ಕಾಯಿನ್ ಸಭಾಂಗಣ ದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಮ್ಮೇಳನ ವನ್ನು ಉದ್ಘಾಟಿಸಿದ ಮಹಂತೇಶ್ ಅವರು, ಕಾರ್ಮಿಕ ಸಂಘನೆಗಳು ದಿಟ್ಟ ಹೋರಾಟದ ಮಾರ್ಗದಲ್ಲಿ ಪಡೆದುಕೊಂಡ ಸವಲತ್ತುಗಳನ್ನು ಇಲ್ಲವಾಗಿಸಲು ಕೇಂದ್ರದಲ್ಲಿ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರಗಳು ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾರ್ಮಿಕ ಕಾನೂನು ಗಳನ್ನು ತಿರುಚಿ ಬಂಡವಾಳಶಾಹಿ ಹಾಗೂ ಮಾಲೀಕ ವರ್ಗಕ್ಕೆ ಸಹಾಯ ಮಾಡುತ್ತಿದೆ. ಕಾರ್ಮಿಕ ವರ್ಗದ ಪರವಾದ ಸಾಮಾಜಿಕ ಭದ್ರತೆ ಪಿಂಚಣಿ ಇನ್ನಿತರ ವಿಷಯಗಳಲ್ಲಿ ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ. ಕೇಂದ್ರ ಸರಕಾರದ ನೋಟು ಅಮಾನ್ಯಕರಣದಿಂದಾಗಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಲ್ಲದೆ ಕಾರ್ಮಿಕ ವರ್ಗ ಇದರಿಂದ ತೀವ್ರ ಸಂಕಷ್ಟವನ್ನು ಅನುಭವಿಸುವಂತಾಯಿತು ಎಂದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ದುರ್ಗಾಪ್ರಸಾದ್ ಮಾತನಾಡಿ, ಕಾರ್ಮಿಕ ವರ್ಗಗಳ ಒಮ್ಮತ ಹಾಗೂ ಸಂಘಟನೆಯ ಹೋರಾಟದಿಂದ ಇಂದು ಕಾರ್ಮಿಕ ವರ್ಗಕ್ಕೆ ನ್ಯಾಯ ಸಮ್ಮತವಾದ ವೇತನ, ಸವಲತ್ತುಗಳು ದೊರೆಯಬೇಕಾಗಿದೆ. ಸಂಘಟನೆಗಳು ಎರಡು ಸರಕಾರಗಳ ಕಾರ್ಮಿಕ ನೀತಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳು ಒಮ್ಮತವನ್ನು ಸಾಧಿಸಬೇಕು ಎಂದು ಹೇಳಿದರು.

ಸಮ್ಮೇಳನದಲ್ಲಿ ಸೋಮವಾರ ಪೇಟೆ ತಾಲೂಕು, ಮಡಿಕೇರಿ ತಾಲೂಕು ವೀರಾಜಪೇಟೆ ತಾಲೂಕು ಸೇರಿದಂತೆ ಕೊಡಗು ಜಿಲ್ಲೆಯ ಸಿಐಟಿಯು ಸಂಘಟನೆಗೆ ಸಂಬಂಧಿಸಿದಂತೆ ಸುಮಾರು ಎಂಟು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ಧರ್ಮೇಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಪಿ.ಆರ್. ಭರತ್, ಎ.ಸಿ. ಸಾಬು ಸಿ.ಐ.ಟಿ.ಯು. ಪದಾಧಿಕಾರಿಗಳು ಹಾಜರಿದ್ದರು.