*ಗೋಣಿಕೊಪ್ಪಲು, ಸೆ. 24: ರೂ. 59.92 ಲಕ್ಷ ನಿವ್ವಳ ಲಾಭದಿಂದ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿಯ ಹಾದಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ತಿಳಿಸಿದ್ದಾರೆ.
ತಿತಿಮತಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ 84ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಂಘದ 1271 ಸದಸ್ಯರ ವಾರ್ಷಿಕ ವಹಿವಾಟಿನಿಂದ ಬ್ಯಾಂಕ್ ಲಾಭದ ಹಾದಿಯತ್ತ ಸಾಗಲು ಕಾರಣವಾಗಿದೆ. ಬ್ಯಾಂಕಿನಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮತ್ತಷ್ಟು ವ್ಯಾಪಾರ ವಹಿವಾಟುಗಳನ್ನು ನಡೆಸಿದಾಗ ಹಿರಿಯರು ಉದ್ದೇಶದಿಂದ ನಿರ್ಮಿಸಿದ ಸಹಕಾರ ಸಂಘ ಮತ್ತಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಬಲ್ಲದು. ಬ್ಯಾಂಕ್ ಅಭಿವೃದ್ಧಿ ಹೊಂದಲು ಸದಸ್ಯರ ಸಹಕಾರ ಬಹುಮುಖ್ಯ. ಸದಸ್ಯರು ಇದಕ್ಕೆ ಪೂರಕ ವಾತವರಣವನ್ನು ನಿರ್ಮಿಸಿ ಹೆಚ್ಚಿನ ವಹಿವಾಟನ್ನು ಬ್ಯಾಂಕಿನಲ್ಲಿ ನಡೆಸಬೇಕು ಎಂದು ಹೇಳಿದರು.
ಸಹಕಾರ ಸಂಘದ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳ ಮೂಲಕ ಸಾಲದ ರೂಪದಲ್ಲಿ ಹಣ ನೀಡಲಾಗುತ್ತದೆ. ಸಂಘದಲ್ಲಿ ಪಿಗ್ಮಿ ಸಾಲ, ಜಾಮೀನು ಸಾಲ, ಆಭರಣ ಸಾಲ, ವ್ಯಾಪಾರ ಸಾಲ, ಸ್ವಸಹಾಯ ಗುಂಪು ಸಾಲ, ನಿರಖು ಠೇವಣಿ ಸಾಲ, ಕೆ.ಸಿ.ಸಿ. ಸಾಲ, ವ್ಯಾಪಾರ ಸಾಲ, ಅಸಾಮಿ ಸಾಲ, ಸಿಬ್ಬಂದಿ ಭವಿಷ್ಯನಿಧಿ ಮತ್ತು ಕೃಷಿ ಮತ್ತು ಕೃಷಿಯೇತರ ಸಾಲಗಳನ್ನು ನೀಡಲಾಗುತ್ತಿದೆ. ಅಲ್ಲದೇ ಸಂಘದಲ್ಲಿ ಗೊಬ್ಬರ, ಕೃಷಿ ಸಲಕರಣೆ, ಕ್ರಿಮಿನಾಶಕ, ಇನ್ನಿತರ ವಸ್ತುಗಳನ್ನು ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಸದಸ್ಯರು ಪಡೆದುಕೊಳ್ಳಬೇಕು. ಅಲ್ಲದೇ ಸಾಲ ಪಡೆದುಕೊಂಡ ಸದಸ್ಯರು ಅವಧಿಯ ಮುಂಚಿತವಾಗಿ ಸಾಲವನ್ನು ಮರುಪಾವತಿಸಿದರೆ ಬ್ಯಾಂಕಿನ ವ್ಯವಹಾರ ಮುನ್ನಡೆಸಲು ಸಾಧ್ಯವೆಂದು ಸಲಹೆ ನೀಡಿದರು.
10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಲಿಷ್ಮಿತ. ಬಿ.ಜಿ. ಪ್ರಥಮ, ತೀರ್ಥ. ಪಿ.ಎಂ. ದ್ವಿತೀಯ ಮತ್ತು ಸುಮನ್ ವಿ.ಆರ್. ತೃತಿಯ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಲಿಖಿತ ವಿ.ಆರ್., ಪ್ರಥಮ, ಅಕ್ಷಯ್. ಬಿ.ಜಿ. ದ್ವಿತೀಯ, ರಂಜನ್. ವಿ.ಎಂ. ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ದರ್ಶನ್. ವಿ.ಡಿ., ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಅಕ್ಷಿತಾ ವಿ.ಎಸ್. ಇವರುಗಳಿಗೆ ಪೆÇ್ರೀತ್ಸಾಹಕರ ಬಹುಮಾನ ನೀಡಲಾಯಿತು.
2018ರಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಾದ ಮಕ್ಕಂದೂರು, ಗರ್ವಾಲೆ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಕೆ.ಸಿ.ಸಿ. ಸಾಲಗಾರ ರೈತರನ್ನು ಗುರುತಿಸಿ ಸರಳ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ 4.20 ಸಾವಿರ ರೂಪಾಯಿಗಳನ್ನು ಹಂಚಲಾಯಿತು.
25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಪಿ.ಎನ್. ಪುಟ್ಟಸ್ವಾಮಿ, ಪಿ.ಎಂ. ಕಾವೇರಮ್ಮ, ವಿ.ಆರ್. ಮೋಹನ, ವಿ.ಎಸ್. ಸುಬ್ರಮಣಿ ಇವರುಗಳನ್ನು ಸಂಘದ ಆಡಳಿತ ಮಂಡಳಿ ಇವರ ಸೇವೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಪಾಲೇಂಗಡ ಜೆ. ನಂಜಪ್ಪ, ಚಕ್ಕೇರ ಎಂ. ಅಚ್ಚಯ್ಯ, ಮನೆಯಪಂಡ ಮಹೇಶ್, ಬೊಳ್ತಂಡ ಬಿ. ಚಂಗಪ್ಪ, ಎಸ್.ವಿ. ಚಂದ್ರಶೇಖರ್, ಹೆಚ್.ಬಿ. ಗಣೇಶ್, ಹೆಚ್.ಎಸ್. ಗೋವಿಂದ, ಹೆಚ್.ಡಿ. ಲಕ್ಷ್ಮಮ್ಮ, ಜಿ.ಎನ್. ಜಯಮ್ಮ, ಕೆ.ಕೆ. ಪದ್ಮನಾಭ, ಎಂ.ಎ. ಮಂಜುಳ, ಎ.ಆರ್. ಸವಿತಾ, ಸಂಘದ ವ್ಯವಸ್ಥಾಪಕ ವಿ.ಎಸ್. ಸುಬ್ರಮಣಿ, ಡಿಸಿಸಿ ಬ್ಯಾಂಕ್ ಗೋಣಿಕೊಪ್ಪಲು ಶಾಖೆಯ ವ್ಯವಸ್ಥಾಪಕ ಕೆ.ಬಿ. ದೇವಯ್ಯ, ಮೇಲ್ವಿಚಾರಕಿ ಭಾರತಿ ಸೇರಿದಂತೆ ಸಂಘದ ಸದಸ್ಯರುಗಳು, ಪಿಗ್ಮಿ ಸಂಗ್ರಹಗಾರರು ಹಾಜರಿದ್ದರು.