ಕೂಡಿಗೆ, ಸೆ. 24: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಕಳೆದ ಒಂದು ತಿಂಗಳ ಹಿಂದೆ ಅತ್ಯಧಿಕವಾಗಿ ಅಪಾಯ ಮಟ್ಟದಲ್ಲಿ ಹರಿದ ಕಾವೇರಿ ನದಿಯ ನೀರಿನ ರಭಸಕ್ಕೆ ಸಿಲುಕಿ ಸಂಪೂರ್ಣ ಹಾನಿಯಾಗಿತ್ತು.

ನೀರಿನ ಒತ್ತಡಕ್ಕೆ ಕಬ್ಬಿಣದ ಸಲಾಕೆಗಳು ತುಂಡಾಗಿದ್ದು, ಅದಕ್ಕೆ ಅಳವಡಿಸಿದ್ದ ಮೆಟ್ಟಿಲುಗಳು ಕೊಚ್ಚಿ ಹೋಗಿ, ಕೆಲವು ಮೆಟ್ಟಿಲುಗಳು ಮತ್ತು ರ್ಯಾಕ್ ಮಾತ್ರ ಉಳಿದಿವೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸಿ, ಇಂಜಿನಿಯರ್‍ಗಳಿಂದ ಮಾಹಿತಿ ಪಡೆದು ಅವರ ಅನುದಾನದಲ್ಲಿ ತೂಗು ಸೇತುವೆ ದುರಸ್ತಿ ಕಾರ್ಯ ಪ್ರಾರಂಭವಾಗಿದೆ.

45 ಮೆಟ್ಟಿಲುಗಳನ್ನು ಸುಳ್ಯದಿಂದ ಈಗಾಗಲೇ ತರಿಸಲಾಗಿದೆ. ತುಂಡಾಗಿರುವ ಕಬ್ಬಿಣದ ಸಲಾಕೆಗಳನ್ನು ಸರಿಪಡಿಸುವದು. ಅಲ್ಲದೆ, ತೂಗುಸೇತುವೆಯ ಜೋಡಣೆಯಲ್ಲಿರುವ ಉದ್ದವಾದ ಕಬ್ಬಿಣದ ಸರಳುಗಳನ್ನು ಜೋಡಿಸುವದು. ಕಬ್ಬಿಣದ ಹಗ್ಗಗಳು ತುಂಡಾಗಿದ್ದು, ಅವುಗಳನ್ನು ಹೊಸದಾಗಿ ಅಳವಡಿಸುವ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ.

ಈಗಾಗಲೇ ಹಾನಿಗೊಳಾಗಿರುವ ತೂಗುಸೇತುವೆಯು ಅಪಾಯ ಮಟ್ಟದಲ್ಲಿದ್ದರೂ ಸಹ ವಿದ್ಯಾರ್ಥಿಗಳು, ಜನರು ಎಲ್ಲರೂ ಸಹ ತೂಗುಸೇತುವೆಯ ಮೇಲೆಯ ಸಂಚರಿಸುತ್ತಿದ್ದು, ಇದನ್ನು ಗಮನಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಶಾಸಕರ ಪ್ರಯತ್ನದಿಂದ ತೂಗುಸೇತುವೆಯ ದುರಸ್ತಿ ಕಾರ್ಯ ಆರಂಭವಾಗಿದೆ.

ಈ ಸಂದರ್ಭ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕುಶಾಲನಗರದ ಉದ್ಯಮಿ ಪುಂಡರೀಕಾಕ್ಷ, ದೇವಾಲಯ ಸಮಿತಿಯ ನಿರ್ದೇಶಕರು, ಗ್ರಾಮದ ಪ್ರಮುಖರು ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ.