ಮಡಿಕೇರಿ, ಸೆ. 14: ಕೊಡಗು ಜಿಲ್ಲೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಅತಿವೃಷ್ಟಿಗೆ ಸಿಲುಕಿ ತತ್ತರಿಸುವಂತಾಗಿದೆ. ಆದರೆ ಜಿಲ್ಲೆಯಲ್ಲಿ ಕೊಡವರು ಸೇರಿದಂತೆ ಇನ್ನಿತರ ಮೂಲನಿವಾಸಿಗಳಾಗಿ ಕಳೆದ ಹಲವಾರು ವರ್ಷಗಳಿಂದ ಬದುಕು ಸಾಗಿಸುತ್ತಿರುವ ಇಲ್ಲಿನ ಜನತೆಗೆ ಸೂಕ್ತ ರೀತಿಯ ಪರಿಹಾರಗಳು, ಸ್ಪಂದನಗಳು ಸರಕಾರ ಹಾಗೂ ಸಂಬಂಧಿಸಿದವರಿಂದ ಸಿಗುತ್ತಿಲ್ಲ ಎಂಬ ಆಕ್ಷೇಪ ಇಂದು ವೀರಾಜಪೇಟೆಯಲ್ಲಿ ನಡೆದ ಅಖಿಲ ಕೊಡವ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ವ್ಯಕ್ತಗೊಂಡಿತು.

ಸಮಾಜದ ಗೌರವ ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡು ಇಲ್ಲಿನ ಜನರು ಬದುಕು ಸಾಗಿಸುತ್ತಿದ್ದಾರೆ. ಇದೀಗ ಸತತ ಎರಡು ವರ್ಷದ ಮಳೆಗೆ ಇಲ್ಲಿಯೇ ಬದುಕು ಕಟ್ಟಿಕೊಂಡಿರುವ ಮೂಲನಿವಾಸಿಗಳು ಬೀದಿಗೆ ಬಂದಿದ್ದಾರೆ. ಆದರೆ ಇಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು, ದಾಖಲೆಗಳ ವಿಚಾರಗಳನ್ನು ಮುಂದಿಟ್ಟು ನೈಜ ಅಗತ್ಯವಿರುವವರಿಗೆ ಯಾವದೇ ಪರಿಹಾರ ಮಾರ್ಗಗಳು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಭೆಯ ಮೂಲಕ ನೀಡಲು ನಿರ್ಧರಿಸಲಾಯಿತು.

ವ್ಯಕ್ತಿಯೋರ್ವರು ಕೊಡವರ ಕೋವಿ ಹಕ್ಕಿನ ಕುರಿತಾಗಿ ಎತ್ತಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಸಮಾಜದ ಮೂಲಕ ನಡೆಸುತ್ತಿರುವ ಪ್ರಯತ್ನ ಹಾಗೂ ಪ್ರಸ್ತುತದ ಬೆಳವಣಿಗೆ ಬಗ್ಗೆ ಸಮಾಜದ ಕಾನೂನು ಸಲಹೆಗಾರ ಬಲ್ಲಿಮಾಡ ಬಿ. ಮಾದಪ್ಪ ಸಭೆಗೆ ಮಾಹಿತಿಯಿತ್ತರು. ಜಿಲ್ಲೆಯ ಬಾಣೆ ಜಮೀನು ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂಲಕ ಹೊರ ಬಂದಿರುವ ಆದೇಶದಿಂದ ಈ ಜಮೀನು ಹೊಂದಿರುವವರಿಗೆ ಪ್ರಯೋಜನವಾಗಲಿರುವ ವಿಚಾರದ ಬಗ್ಗೆಯೂ ಈ ಸಂದರ್ಭ ಚರ್ಚೆ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಮುಖಂಡ ಎನ್.ಯು. ನಾಚಪ್ಪ ಅವರು ಬುಡಕಟ್ಟು ಸ್ಥಾನಮಾನ ಹಾಗೂ ಭಾಷಾ ಅಲ್ಪಸಂಖ್ಯಾತ ಸ್ಥಾನದ ಬೇಡಿಕೆಯ ಬಗ್ಗೆ ವಿವರಣೆಯಿತ್ತರು. ಮಹಾಸಭೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಅಮ್ಮತ್ತಿ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ, ಪೊನ್ನಂಪೇಟೆ ಸಮಾಜದ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕುಶಾಲನಗರ ಸಮಾಜದ ಅಂಜಪರವಂಡ ನಂಜಪ್ಪ, ಟಿ.ಶೆಟ್ಟಿಗೇರಿಯ ಕೋಟ್ರಮಾಡ ಅರುಣ್ ಭೀಮಯ್ಯ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಸೇರಿದಂತೆ ಅ.ಕೊ.ಸಮಾಜದ ಪ್ರತಿನಿಧಿಗಳು, ಇತರ ಕೊಡವ ಸಮಾಜದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಡಾ. ಕಾಳಿಮಾಡ ಶಿವಪ್ಪ ಪ್ರಾರ್ಥಿಸಿ, ಅ.ಕೊ.ಸ. ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ ವಂದಿಸಿದರು. ಸಮಾಜದ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಪದಾಧಿಕಾರಿಗಳಾದ ನಂದೇಟಿರ ರಾಜ ಮಾದಪ್ಪ, ಅಪ್ಪುಮಣಿಯಂಡ ತುಳಸಿ ಮತ್ತಿತರರು ಹಾಜರಿದ್ದರು.