ಮಡಿಕೇರಿ, ಸೆ. 22: ಮಡಿಕೇರಿಯ ಚೇಂಬರ್ ಆಫ್ ಕಾಮರ್ಸ್ ಬ್ಯಾಂಕ್ ಸಭಾಂಗಣದಲ್ಲಿ ಅಹ್ಮದಿಯಾ ಮುಸ್ಲಿಂ ಜಮಾಅತ್‍ನ ಕರ್ನಾಟಕ ದಕ್ಷಿಣ ವಲಯ ಮಹಿಳಾ ಘಟಕ ಹಾಗೂ ಮಡಿಕೇರಿಯ ಘಟಕದ ವತಿಯಿಂದ ಸರ್ವಧರ್ಮ ಮಹಿಳಾ ಶಾಂತಿ ಸಮ್ಮೇಳನ ನಡೆಯಿತು. ಅತಿಥಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ನೂರುನ್ನೀಸಾ ಪಾಲ್ಗೊಂಡಿದ್ದರು.

ಶಾಂತಿ, ಸೌಹಾರ್ದತೆ ಮೊದಲು ಮನೆಯಿಂದ ಕಲಿಯಬೇಕು. ಒಬ್ಬ ಮಹಿಳೆ ಹೆಂಡತಿಯಾಗಿ, ಅಮ್ಮನಾಗಿ, ಮಗಳಾಗಿ ಕುಟುಂಬದ ಯೋಗಕ್ಷೇಮದಲ್ಲೆ ತನ್ನ ಇಡೀ ಜೀವನ ಸವೆಸುತ್ತಾಳೆ. ಈ ಕಾರ್ಯಕ್ಕೆ ಮಹಿಳೆಯನ್ನು ಗೌರವಿಸುವದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಕವಿತಾ ರೈ ಮಾತನಾಡಿ, ಸೌಹಾರ್ದತೆಯಿಂದ ಬದುಕುವದು ಭಾರತೀಯತೆ ಎನಿಸಿಕೊಳ್ಳುತ್ತದೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸುವದನ್ನು ಪ್ರತಿಯೊಂದು ಧರ್ಮ ಕಲಿಸಿದೆ ಎಂದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪುಷ್ಪಾ ಕುಟ್ಟಣ್ಣ ಮಾತನಾಡಿ, ವಿವಿಧ ಧರ್ಮಗಳ ಆಚರಣೆಗಳು ಬೇರೆ ಬೇರೆಯಾಗಿದ್ದರೂ, ಅವುಗಳ ಉದ್ದೇಶ, ಸಂದೇಶ ಒಂದೇ ಆಗಿವೆ ಎಂದರು.

ಮಡಿಕೇರಿಯ ಸೇಂಟ್ ಮೈಕಲ್ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಪ್ರತಿಮಾ ರೋಡ್ರಿಗಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಹಿಳಾ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನುಸ್ರತ್ ಮೊಹಮೂದ್ ಮಾತನಾಡಿದರು. ಬೆಂಗಳೂರು ಘಟಕದ ನಸೀಮಾ ನಾಸೀರ್, ಬಾಷಿತ ಅನ್ಸರ್, ಮಡಿಕೇರಿ ಘಟಕದ ಅಧ್ಯಕ್ಷೆ ನಸೀರಾ ರಫೀ ಹಾಜರಿದ್ದರು.