ಮಡಿಕೇರಿ, ಸೆ. 22: ಪ್ರಸಕ್ತ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ 15 ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯಕ್ಕೆ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾ ಸಂಘಟನೆ ಮುಂದಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಕಾರ್ಯದರ್ಶಿ ಎಂ.ವೈ. ಅಶ್ರಫ್ ಫೈಝಿ ಅವರು, ಸಂಘಟನೆಯ ಸಮಸ್ತ ವಸತಿ ನಿರ್ಮಾಣ ಪದ್ಧತಿ ಯೋಜನೆಯಡಿ ತಲಾ ರೂ. 6 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದು ತಿಳಿಸಿದರು.

ಯೋಜನೆಯ ಪ್ರಥಮ ವಸತಿ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ ತಾ. 25 ರಂದು ಮಧ್ಯಾಹ್ನ 2 ಗಂಟೆಗೆ ಎಮ್ಮೆಮಾಡುವಿನಲ್ಲಿ ನಡೆಯಲಿದ್ದು, ದಕ್ಷಿಣ ಭಾರತದ ಮುಸಲ್ಮಾನರÀ ಅಧಿಕೃತ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷರು ಹಾಗೂ ಪ್ರವಾದಿ ಮೊಹಮ್ಮದ್ ಮುಸ್ತಫ ಅವರ ಸಂತತಿಯವರಾದ ಸೈಯ್ಯದ್ ಮುಹಮ್ಮದ್ ಜಫ್ರಿ ಮುತ್ತುಕೋಯ ತಂಞಳ್ ಅವರು ಶಿಲನ್ಯಾಸ ನೆರವೇರಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಮುಶಾವರ್ ಸದಸ್ಯ ಎಂ.ಎಂ. ಅಬ್ದುಲ್ಲಾ ಫೈಝಿ, ಕಾಂಞಂಗಾಡ್ ಸಂಯುಕ್ತ ಜಮಾಅತ್ ಅಧ್ಯಕ್ಷ ಮೆಟ್ರೋ ಮೊಹಮ್ಮದ್ ಹಾಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಸಿದ್ದಾಪುರದ ಉಸ್ಮಾನ್ ಹಾಜಿ, ಗೋಣಿಕೊಪ್ಪಲುವಿನ ಬಶೀರ್ ಹಾಜಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಂ.ವೈ. ಅಶ್ರಫ್ ಫೈಝಿ ವಿವರಿಸಿದರು.

ಪ್ರಸಕ್ತ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೂ. 1000 ಕೋಟಿಗಳನ್ನು ಮೀಸಲಿಟ್ಟಿರುವದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ದೇಶಕ್ಕೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡಿರುವ ಹಾಗೂ ಮಾತೆ ಕಾವೇರಿಯ ಉಗಮ ಸ್ಥಾನವಾದ ಕೊಡಗಿಗೆ ಈ ಮೊತ್ತದಲ್ಲಿ ಹೆಚ್ಚಿನ ಅನುದಾನವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷ ಎಂ.ಎಂ. ಅಬ್ದುಲ್ಲ ಫೈಝಿ, ಉಪಾಧ್ಯಕ್ಷರುಗಳಾದ ಉಸ್ಮಾನ್ ಫೈಝಿ ಸುಂಟಿಕೊಪ್ಪ, ಮೊಯ್ದು ಫೈಝಿ ಎಡಪಾಲ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಸಂಘಟನಾ ಕಾರ್ಯದರ್ಶಿ ವೈ.ಎಂ. ಉಮ್ಮರ್ ಪೈಝಿ ಉಪಸ್ಥಿತರಿದ್ದರು.