ಗೋಣಿಕೊಪ್ಪ ವರದಿ, ಸೆ. 22: ರಾಜಕೀಯ ಹಾಗೂ ಗೊಂದಲ ಮುಕ್ತ ದಸರಾ ಆಚರಿಸಲು ಶ್ರೀ ಕಾವೇರಿ ದಸರಾ ಸಮಿತಿಗೆ ಸಾರ್ವಜನಿಕರನ್ನು ಒಂದುಗೂಡಿಸಿ ಸಮಿತಿ ರಚಿಸಿ ಮುಂದುವರಿಯಬೇಕು ಎಂಬ ಒತ್ತಾಯ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಆಯೋಜಿಸಿದ್ದ ಮುಕ್ತ.. ಮುಕ್ತ.. ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಗೋಣಿಕೊಪ್ಪ ದಸರಾ ಆಚರಣೆಯಲ್ಲಿನ ಗೊಂದಲ ಹಿನ್ನೆಲೆ, ಸಮಿತಿ ರಚನೆಯಲ್ಲಿನ ಲೋಪ, ಸಾರ್ವಜನಿಕರ ಕಡೆಗಣನೆ, ಎರಡು ಮಹಿಳಾ ದಸರಾ ಸಮಿತಿ ಅಧ್ಯಕ್ಷರ ಆಯ್ಕೆ ಹಾಗೂ ಕಾವೇರಿ ದಸರಾ ಸಮಿತಿಯ ಏಕಪಕ್ಷೀಯ ನಿರ್ಧಾರದಲ್ಲಿನ ಗೊಂದಲ ನಿವಾರಣೆಗೆ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮುಕ್ತ, ಮುಕ್ತ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಭಿಪ್ರಾಯ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಕಾವೇರಿ ದಸರಾ ಸಮಿತಿಯನ್ನು ಬದಲಾಯಿಸುವ ಮೂಲಕ ರಾಜಕೀಯ, ಗೊಂದಲ ನಿವಾರಣೆಗೆ ಮುಂದಾಗಬೇಕು. ಸರ್ಕಾರದ ಅನುದಾನ ಬಳಕೆಯಾಗುತ್ತಿರುವ ದರಿಂದ ಪ್ರತ್ಯೇಕವಾಗಿ ನೋಡಲ್ ಅಧಿಕಾರಿ ನೇಮಕ ಮಾಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಸಾರ್ವಜನಿಕರನ್ನು ಒಂದುಗೂಡಿಸಿ ಮುಂದುವರಿಯ ಬೇಕಾಗಿದ್ದ ಸಮಿತಿ ರಚಿಸಬೇಕಿದ್ದ ಕೆಲಸವನ್ನು ಪ್ರೆಸ್‍ಕ್ಲಬ್ ಮಾಡಿದೆ. ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿ ಸಮಿತಿ ರಚಿಸಬೇಕಿತ್ತು. ಏಕಪಕ್ಷೀಯ ವಾಗಿ ಸಮಿತಿಗೆ ಪ್ರಮುಖರನ್ನು ಆಯ್ಕೆಮಾಡಿಕೊಂಡಿರುವದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ಸ್ಥಾನ ಹೊರತುಪಡಿಸಿ ಇಲ್ಲಿಯವರೆಗೆ ಸಾರ್ವಜನಿಕವಾಗಿ ನಡೆಯುತ್ತಿದ್ದ ಪದಾಧಿಕಾರಿ, ಸಮಿತಿಗಳ ಆಯ್ಕೆಯನ್ನು ಸಭೆ ನಡೆಸದೆ ನಡೆಸಿರುವ ಕಾವೇರಿ ದಸರಾ ಸಮಿತಿ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಅಧ್ಯಕ್ಷನಾಗಿ ಒತ್ತಡ ಎದುರಿಸುತ್ತಿದ್ದೇನೆ. ಎಲ್ಲವನ್ನೂ ಹೇಳಿಕೊಳ್ಳಲು ಆಗುತ್ತಿಲ್ಲ. ಪ್ರತೀ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಯೋಜನೆ ರೂಪಿಸಲಾಗುವದು. ಭಿನ್ನಾಭಿಪ್ರಾಯ ಸರಿಪಡಿಸಿ, ಮುಂದುವರಿಸಲಾಗುವದು. ಸಮಿತಿಯಲ್ಲಿ ಬೈಲಾ ತಿದ್ದುಪಡಿಯಾಗದ ಕಾರಣ ಆಯ್ಕೆಯಲ್ಲಿ ಗೊಂದಲ ವಾಗುತ್ತಿದೆ. ದಸರಾ ನಂತರ ಬೈಲಾ ಸಮಿತಿ ಸಭೆ ಕರೆಯಲಾಗುವದು ಎಂದರು.

ಕಾವೇರಿ ದಸರಾ ಸಮಿತಿ ಸ್ವಯಂಘೋಷಿತ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ ಮಾತನಾಡಿ, ಸಮಿತಿ ರಚನೆ ವಿಚಾರದಲ್ಲಿ ತಪ್ಪಾಗಿರುವದು ಅರಿವಾಗಿದೆ. ದ್ವೇಷವಿಲ್ಲದೆ ಅಚ್ಚುಕಟ್ಟಾಗಿ ದಸರಾ ನಡೆಸಲು ಸಾರ್ವಜನಿಕ ಸಭೆ ನಡೆಸಿ ಮುಂದುವರಿಯಬೇಕು. ಕಾವೇರಿ ದಸರಾ ಸಮಿತಿ ಮತ್ತೊಂದು ಸಭೆ ನಡೆಸಿ ಆಚರಣೆ ರೂಪುರೇಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಿರಿಯರಾದ ಡಾ. ಚಂದ್ರಶೇಖರ್ ಮಾತನಾಡಿ, ರೂ. 30 ಲಕ್ಷ ಅನುದಾನದ ಗೋಣಿಕೊಪ್ಪ ದಸರಾ ಆಚರಣೆಗೆ ಕನಿಷ್ಟ 100 ದಿನದ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ನಾಡ ಹಬ್ಬ ಎಂದು ಆಚರಿಸುವ ದಸರಾ ಸಾರ್ವಜನಿಕ ಮುಕ್ತವಾಗಬೇಕು. ಸಮಿತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದÀ್ಯತೆ ನೀಡಬೇಕು. ಸಮಿತಿಯಿಂದ ಮಾಸಿಕ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಂಟಪ ಸಮಿತಿ ಪ್ರಮುಖ ಪರಶುರಾಮ್ ಮಾತನಾಡಿ, ಯಾರನ್ನೂ ಕೇಳದೆ ಸಮಿತಿ ರಚಿಸಿಕೊಂಡಿದ್ದಾರೆ. ಹೀಗಾಗಿ ಸಭೆ ಕರೆದು ಸಮಿತಿ ರಚಿಸಲು ಆಗ್ರಹಿಸಿದರು.

ಮಹಿಳಾ ದಸರಾ ಸ್ಥಾಪಕ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಮಾತನಾಡಿ, ದಸರಾ ಆಚರಿಸಲು ಅವಕಾಶ ನೀಡಬಾರದು. ರಾಜಕೀಯ ಬಿಟ್ಟು, ಸಾಮರಸ್ಯ ಮೂಡಿಸಲು ಒತ್ತಾಯಿಸಿದರು.

ಮಂಟಪ ಸಮಿತಿ ಸದಸ್ಯ ಜಲೀಲ್ ಮಾತನಾಡಿ, ಮಹಾಸಭೆ ಯಲ್ಲಿ ಸಮಿತಿ ರಚಿಸಬಹುದಿತ್ತು. ವಿಶಾಲ ಭಾವನೆಯಿಂದ ದಸರಾ ನಡೆಸಲು ಸಾರ್ವಜನಿಕ ಸಭೆ ಕರೆದು ಮುಂದುವರಿಯುವಂತೆ ಒತ್ತಾಯಿಸಿದರು. ಮಹಿಳಾ ಸಬಲೀಕರಣಕ್ಕೆ ಅವಕಾಶ ನೀಡದೆ ತುಳಿಯುವ ಪ್ರಯತ್ನ ಕಾವೇರಿ ದಸರಾ ಸಮಿತಿ ನಡೆಸುತ್ತಿದೆ ಎಂದು ಮಹಿಳಾ ದಸರಾ ಸಮಿತಿ ಪ್ರ. ಕಾರ್ಯದರ್ಶಿ ಪ್ರಭಾವತಿ ಆರೋಪಿಸಿದರು.

ಕಾವೇರಿ ದಸರಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ರಾಜಕೀಯ, ಬೇಧಭಾವ ಬಿಟ್ಟು ಮುಂದುವರಿಯಬೇಕು. ಸಾಂಸ್ಕøತಿಕ ಸಮಿತಿಗೆ ಕಲೆ ಹಿನ್ನೆಲೆ ಇರುವವರನ್ನು ಆಯ್ಕೆ ಮಾಡಬೇಕು ಎಂದರು.

ಕಾವೇರಿ ದಸರಾ ಸಮಿತಿ ಹಿರಿಯ ಸದಸ್ಯ ಮಹಮ್ಮದ್ ರಫಿ ಮಾತನಾಡಿ, ಜಾನಪದ ವೇದಿಕೆಯಾಗಿ ದಸರಾ ನಡೆಯುತ್ತಿದೆ. ಇದನ್ನು ಸಾರ್ವಜನಿಕ ಊರಹಬ್ಬವಾಗಿ ಆಚರಿಸಲು ಮುಂದಾಗಬೇಕು ಎಂದು ತಿಳಿಸಿದರು.

ಕಣ್ಣೀರಿಟ್ಟ ಮಹಿಳಾ ಅಧ್ಯಕ್ಷೆ: ಕಾವೇರಿ ದಸರಾ ಸಮಿತಿಯು ಮಹಿಳಾ ದಸರಾಕ್ಕೆ ಎರಡು ಅಧ್ಯಕ್ಷರನ್ನು ಆಯ್ಕೆ ಮಾಡಿರುವ ಕ್ರಮಕ್ಕೆ ನೊಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಸುಮಿ ಸುಬ್ಬಯ್ಯ ಕಣ್ಣೀರಿಟ್ಟರು. ಮಹಿಳಾ ದಸರಾ ಸಮಿತಿಯಿಂದ ಕರೆಯಲಾಗಿದ್ದ ಸಭೆಗೆ ನೂರೇರ ರತಿ ಗೈರಾಗುವ ಮೂಲಕ ಮತ್ತೊಂದು ತಂಡ ಕಟ್ಟಿಕೊಂಡು ಅಧ್ಯಕ್ಷರಾಗಿರುವದು ನೋವಿನ ವಿಚಾರ ಎಂದರು.

ಕಾವೇರಿ ದಸರಾ ಸಮಿತಿ ಹಿರಿಯ ಸದಸ್ಯ ಕೆ. ರಾಮಾಚಾರ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಥಳೀಯವಾಗಿ ಕಾರ್ಯಕ್ರಮ ನಡೆಸುವದರಿಂದ ಗೋಣಿಕೊಪ್ಪ ವಿಶೇಷತೆ ಪಡೆದುಕೊಂಡಿದೆ ಎಂದರು.

ಪ್ರೆಸ್‍ಕ್ಲಬ್ ಪ್ರ. ಕಾರ್ಯದರ್ಶಿ ಎಚ್.ಕೆ. ಜಗದೀಶ್ ಮಾತನಾಡಿ, ಸಾರ್ವಜನಿಕ ಅಭಿಪ್ರಾಯವನ್ನು ಜಿಲ್ಲಾಡಳಿತಕ್ಕೆ ತಲಪಿಸಲಾಗುವದು. ಗೊಂದಲದಿಂದ ಹೊರ ಬಂದು ದಸರಾ ಆಚರಣೆ ನಡೆಯಬೇಕು ಎಂದರು.

ಶರತ್ ಕಾಂತ್, ಶಾಜಿ, ಶರತ್, ಬಾಲಕೃಷ್ಣ ರೈ, ಮುರುಗ, ಕಡೇಮಾಡ ಕುಸುಮಾ ಜೋಯಪ್ಪ, ಸುಬ್ರಮಣಿ ಹಾಗೂ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.