ಕರಿಕೆ, ಸೆ, 23: ಕಾಞಂಗಾಡ್, ಪಾಣತ್ತೂರು, ಕರಿಕೆ, ಮಡಿಕೇರಿ ಅಂತರರಾಜ್ಯ ಹೆದ್ದಾರಿ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ಶಕ್ತಿ ಮೀರಿ ಪ್ರಯತ್ನ ಮಾಡುವದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು. ಜಿಲ್ಲೆಯ ಗಡಿ ಗ್ರಾಮ ಕರಿಕೆಯಲ್ಲಿ ಏಳು ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗಡಿ ಗ್ರಾಮ ಕರಿಕೆಯೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಸಂಪರ್ಕ ಹೊಂದಿದೆ. ಇಲ್ಲಿನ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದು, ಇಡೀ ಗ್ರಾಮದ ಮೂಲೆ ಮೂಲೆಗೂ ಸಂಚರಿಸಿ ಇಲ್ಲಿನ ಗ್ರಾಮೀಣ ರಸ್ತೆಗಳ ದುಸ್ಥಿತಿಯನ್ನು ಅರಿತು ಕಳೆದ ಹತ್ತಾರು ವರ್ಷ ಗಳಿಂದ ವಿವಿಧ ಯೋಜನೆಗಳಾದ ಮಲೆ ನಾಡು ಅಭಿವೃದ್ಧಿ, ಗಡಿನಾಡು ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ,ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಗ್ರಾಮಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡಲಾಗಿದೆ. ಪ್ರತಿ ರಸ್ತೆಗಳು ಶೇ. ಎಪ್ಪತ್ತರಷ್ಟು ಅಭಿವೃದ್ಧಿ ಹೊಂದಿರುವದು ಸಂತಸದ ವಿಷಯವಾಗಿದೆ. ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಪಕ್ಷವಿರುವದರಿಂದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಚುರುಕು ಗೊಳ್ಳಲಿರುವದಾಗಿ ತಿಳಿಸಿದರು. ಭಾಗಮಂಡಲ - ಕರಿಕೆ ರಸ್ತೆ ಅಭಿವೃದ್ಧಿ, ಮಡಿಕೇರಿ, ಕರಿಕೆ, ಕಾಞಂಗಾಡ್‍ಗೆ ನೂತನ ಸಾರಿಗೆ ಸಂಸ್ಥೆ ಬಸ್ ಸಂಚರಿಸಲು ಕ್ರಮವಹಿಸಲಾಗುವದು, ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಲು ಕೂಡಲೇ ಅಕ್ರಮ ಸಕ್ರಮ ಸಮಿತಿ ರಚಿಸಿ ಕಡತ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವದು ಎಂದರು. ಅರ್ತು ಕುಟ್ಟಿ ರಸ್ತೆ ಐಟಿಡಿಪಿ ಇಲಾಖೆ ಇಪ್ಪತ್ತು ಲಕ್ಷ, ಕುಡಿಯಂಗಲ್ಲು ರಸ್ತೆ ಇಪ್ಪತ್ತು ಲಕ್ಷ, ಕೊಳಂಗಾರೆ ರಸ್ತೆ ಒಂಭತ್ತು ಲಕ್ಷ, ಕುಂಡತ್ತಿಕಾನ ರಸ್ತೆ ಮೂವತ್ತು ಲಕ್ಷ, ಕುಂಡತ್ತಿಕಾನ ಬಿ.ಸಿ.ಶೇಷಪ್ಪ ಮನೆ ರಸ್ತೆ ಇಪ್ಪತ್ತೈದು ಲಕ್ಷ, ದೊಡ್ಡ ಚೇರಿ ರಸ್ತೆ ಮೂವತ್ತು ಲಕ್ಷ, ಸೇರಿದಂತೆ ಒಟ್ಟು ಲೋಕೋಪಯೋಗಿ ಇಲಾಖೆಯ ಐದೂವರೆ ಕೋಟಿ ಹಾಗೂ ಐಟಿಡಿಪಿ ಇಲಾಖೆಯ ಎರಡೂವರೆ ಕೋಟಿ ರೂಪಾಯಿ ಅನುದಾನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವದರ ಮೂಲಕ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಬಾಜಪ ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್ ಅವರು ಗ್ರಾಮದಲ್ಲಿನ ಪ್ರಮುಖ ಸಮಸ್ಯೆಗಳಾದ ಬಿಎಸ್‍ಎನ್‍ಎಲ್ ಟವರ್, ಅಕ್ರಮ ಸಕ್ರಮ, ಅರಣ್ಯ ಹಕ್ಕು ಪತ್ರ, ಅಂತರರಾಜ್ಯ ಹೆದ್ದಾರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಶಾಸಕರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿ.ಪ. ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ದೇವರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚಿಕ್ಕಬಸವಯ್ಯ, ಕರಿಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಕೆ.ಜೆ., ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಪಂಚಾಯಿತಿ ಸದಸ್ಯೆ ಉಷಾಕುಮಾರಿ, ಭಾಜಪ ಯುವ ಮೋರ್ಚ ಜಿಲ್ಲಾಧ್ಯಕ್ಷ ಕಾಳನ ರವಿ, ಪ್ರಮುಖರಾದ ರಮೇಶ್ ಬಿ.ಕೆ., ಪ್ರಭಾಕರ್, ಐಸಾಕ್, ಜಯಂತ, ವಿಜಯ, ಆರ್.ಎಂ.ಸಿ. ಸದಸ್ಯ ನಾರಾಯಣ ಸೇರಿದಂತೆ ಇತರ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು. -ಹೊದ್ದೆಟ್ಟಿ ಸುಧೀರ್