ಮಡಿಕೇರಿ, ಸೆ. 22: ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತಿದ್ದು, ಮನುಷ್ಯ, ಪ್ರಾಣಿಗಳಿಗೆ ಆಗಬಹುದಾದ ದುಷ್ಪರಿಣಾಮವನ್ನು ಗಮನದಲ್ಲಿಟ್ಟು ಕೊಂಡು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಸ್ಯ ಸಂಕುಲವನ್ನು ಉಳಿಸಿ ಬೆಳೆಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಂತ ಜೋಸೆಫರ ವಿದ್ಯಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಂತ ಜೋಸೆಫರ ಶಾಲೆಯಲ್ಲಿ ನಡೆದ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್ ಗಣೇಶನ್ ಮಾತನಾಡಿ ಓಜೋನ್ ಪದರದ ಹಾನಿಯಿಂದ ನೇರಳಾತೀತ ನೀಲ ಕಿರಣಗಳು ಭೂಮಿಯನ್ನು ಪ್ರವೇಶಿಸಿ ಜೀವ ಸಂಕುಲಕ್ಕೆ ಹಾನಿ ಉಂಟು ಮಾಡುತ್ತದೆ. ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ. ಇಂಗಾಲ ಪ್ರಮಾಣದ ಬಳಕೆಗೆ ಕಡಿವಾಣ ಹಾಕಿ ಓಜೋನ್ ಪದರದ ರಕ್ಷಣೆ ಮಾಡುವದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಹೇಳಿದರು.
ಸಂತ ಜೋಸೆಫರ ವಿದ್ಯಾಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಆಂಥೋನಿಯಮ್ಮ, ಉಪ ಪರಿಸರಾಧಿಕಾರಿ ಡಾ.ಎಂ.ಕೆ.ಸುಧಾ. ಮುಖ್ಯೋಪಾಧ್ಯಾಯರಾದ ಸಿಸ್ಟರ್ ರೇಲಿಮಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಉಪಾಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯೂ ಮತ್ತಿತರರು ಪಾಲ್ಗೊಂಡಿದ್ದರು. ಜಯಪ್ಪ ಸ್ವಾಗತಿಸಿ, ನಿರೂಪಿಸಿದರು.