ಮಡಿಕೇರಿ, ಸೆ. 22: ತಾಯಿ ಮತ್ತು ಮಗುವಿನ ಆರೈಕೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯ ಕರ್ತರು ವಿಶೇಷ ಗಮನಹರಿಸಬೇಕು ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಮಹದೇವಪೇಟೆಯ ಜಿಲ್ಲಾ ಆಯುಷ್ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಭಾವಿಕವಾಗಿ ದೊರೆಯುವ ಹಣ್ಣು, ತರಕಾರಿಗಳನ್ನು ಬಳಸಿ ಅಪೌಷ್ಟಿಕತೆ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಶುಚಿತ್ವಕ್ಕೆ ಒತ್ತು ನೀಡಬೇಕಿದೆ. ಗ್ರಾಮೀಣಾಭಿವೃದ್ಧಿ ಆದಲ್ಲಿ ಸಮಾಜದ ಏಳಿಗೆಯನ್ನು ಕಾಣಬಹುದಾಗಿದೆ ಎಂದು ಲೋಕೇಶ್ವರಿ ಗೋಪಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ರಾಧ ಅವರು ಮಾತನಾಡಿ ಸರ್ಕಾರ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರು, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಹೆಚ್. ರಾಮಚಂದ್ರ ಮಾತನಾಡಿದರು. ಆಯುಷ್ ವೈದ್ಯರಾದ ಡಾ. ಶುಭ ಪ್ರಾರ್ಥಿಸಿದರು. ಡಾ. ಈಶ್ವರಿ ನಿರೂಪಿಸಿದರು. ಡಾ. ಶೈಲಜಾ ಸ್ವಾಗತಿಸಿದರು. ಡಾ. ಸ್ಮಿತಾ ವಂದಿಸಿದರು. ಡಾ. ಶ್ರೀನಿವಾಸ್ ಇದ್ದರು.