ಮಡಿಕೇರಿ, ಸೆ. 22: ಕೊಡಗು ಮಾತ್ರವಲ್ಲದೆ, ದೇಶ- ವಿದೇಶಗಳಲ್ಲೂ ಗಮನ ಸೆಳೆದಿರುವ ಕೊಡವ ಕುಟುಂಬಗಳ ನಡುವಿನ ‘ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್’ನಲ್ಲಿ ಸ್ಥಾನ ಪಡೆದು ಗಿನ್ನಿಸ್ ದಾಖಲೆಯ ಕದತಟ್ಟುತ್ತಿರುವ ಕೊಡವ ಕೌಟುಂಬಿಕ ಹಾಕಿನಮ್ಮೆ ಇದೀಗ ವರ್ಷದ ಅಂತರದ ಬಳಿಕ ಮತ್ತೊಮ್ಮೆ ತನ್ನ ಗತವೈಭವವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತಿದೆ. 1997ರಲ್ಲಿ ಪಾಂಡಂಡ ಕಪ್ ಹಾಕಿ ಉತ್ಸವ 60 ಕೊಡವ ಕುಟುಂಬಗಳ ಪಾಲ್ಗೊಳ್ಳುವಿಕೆಯೊಂದಿಗೆ ಜಿಲ್ಲೆಯಲ್ಲಿ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದು, ಸತತವಾಗಿ 22 ವರ್ಷಗಳ ತನಕ ನಿರಂತರವಾಗಿ ಮುಂದುವರಿದುಕೊಂಡು ಬಂದಿತ್ತು. 60 ತಂಡಗಳ ಮೂಲಕ ಆರಂಭಗೊಂಡ ಈ ವಿಶಿಷ್ಟ ರೀತಿಯ ಹಾಕಿ ಪಂದ್ಯಾವಳಿ ಕೇವಲ ಒಂದು ಪಂದ್ಯಾವಳಿಯ ರೀತಿಯಲ್ಲಿ ನಡೆದುಕೊಂಡು ಬರದೆ ಕೌಟುಂಬಿಕವಾದ ಉತ್ಸವವಾದರೂ ಇದೊಂದು ‘ಹಬ್ಬ’ ಎಂದೇ ಖ್ಯಾತಿ ಪಡೆದಿರುವದು ಹಾಗೂ ಈ ಸಂಭ್ರಮದ ನಡುವೆ ಅಂತರ್ರಾಷ್ಟ್ರೀಯ ನಿಯಮಗಳ ಅನುಸಾರವಾಗಿ ಯಾವದೇ ಇತರ ಹಾಕಿ ಪಂದ್ಯಾವಳಿಗಳಿಗೆ ಸಡ್ಡುಹೊಡೆಯುವ ರೀತಿಯಲ್ಲಿ ನಡೆದುಕೊಂಡು ಬರುತ್ತಿರುವದು ವಿಶೇಷವಾದದ್ದು.ಈ ಪಂದ್ಯಾವಳಿಯ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಮೂಲಕ 2018ರಲ್ಲಿ ನಾಪೋಕ್ಲುವಿನಲ್ಲಿ ಜರುಗಿದ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ ದಾಖಲೆಯ 333 ತಂಡಗಳು ಪಾಲ್ಗೊಂಡಿದ್ದು ಒಂದು ದಾಖಲೆಯಾಗಿದೆ. 1997ರಿಂದ ಸತತವಾಗಿ ಕೊಡಗಿನ ವಿವಿಧೆಡೆಗಳಲ್ಲಿ ಈ ಉತ್ಸವ ಆಯೋಜಿತಗೊಳ್ಳುತ್ತಿದ್ದು, ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ವಿವಿಧ ಕುಟುಂಬಗಳು ನಡೆಸಿಕೊಂಡು ಬಂದಿತ್ತು. 2018ರ ಏಪ್ರಿಲ್- ಮೇ ತಿಂಗಳಿನಲ್ಲಿ 22ನೇಯ ಮುಕ್ಕಾಟಿರ ಕಪ್- 2020ರ ಲೋಗೋ ರಚನೆಗೊಂಡಿದ್ದು, ಇದರ ಅಧಿಕೃತ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ ಅಂತ್ಯದಲ್ಲಿ ನಡೆಯಲಿದೆ. ಆದರೆ ಈ ಬಾರಿಯ ಕೌಟುಂಬಿಕ ಹಾಕಿ ಉತ್ಸವವನ್ನು ಹೆಚ್ಚು ಪ್ರಚಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನವೊಂದು ತಾ. 22ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ.
ವರ್ಷದ ಪಂದ್ಯಾವಳಿ ಆಯೋಜನೆಗೊಂಡಿದ್ದು, 23ನೆಯ ವರ್ಷದ ಆತಿಥ್ಯವನ್ನು ಹರಿಹರದ ಮುಕ್ಕಾಟಿರ ಕುಟುಂಬಸ್ಥರು ವಹಿಸಿಕೊಂಡು ಧ್ವಜ ಸ್ವೀಕರಿಸಿ ರೂಪು- ರೇಷೆ ಹಮ್ಮಿಕೊಂಡಿದ್ದರು. ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ 2019ರ ಏಪ್ರಿಲ್ - ಮೇನಲ್ಲಿ 23ನೆಯ ವರ್ಷದ ಪಂದ್ಯಾವಳಿ ನಡೆಯಬೇಕಿತ್ತು. ಆದರೆ... 2018ರ ವರ್ಷದ ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈ ತನಕ ಕಂಡುಕೇಳರಿಯದ ಮಾದರಿಯಲ್ಲಿ ಘಟಿಸಿಹೋದ ಜಲಪ್ರಳಯ, ಭೂ-ಬೆಟ್ಟ ಕುಸಿತ, ಸಾವು - ನೋವಿನಂತಹ ದುರಂತಮಯ ಸನ್ನಿವೇಶದಿಂದಾಗಿ ಈ ವರ್ಷದ ಪಂದ್ಯಾವಳಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಒಂದು ವರ್ಷದ ಮಟ್ಟಿಗೆ ಆಚರಿಸದಿರುವಂತೆ ಕೊಡವ ಹಾಕಿ ಅಕಾಡೆಮಿ ಹಾಗೂ ಆತಿಥ್ಯ ವಹಿಸಿದ್ದ ಹರಿಹರ ಮುಕ್ಕಾಟಿರ ಕುಟುಂಬಸ್ಥರು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ 2019ರ ಉತ್ಸವವನ್ನು ಕೈಬಿಡಲಾಗಿತ್ತು.
ಇದೀಗ ಇದೇ ಕುಟುಂಬಕ್ಕೆ ಮುಂದಿನ ವರ್ಷದ (2020ರ) ಹಾಕಿ ಉತ್ಸವವನ್ನು ಮುಂದುವರಿಸುವ ಜವಾಬ್ದಾರಿ ಇದ್ದು,
(ಮೊದಲ ಪುಟದಿಂದ) ಇದಕ್ಕಾಗಿ ಈಗಾಗಲೇ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮುಕ್ಕಾಟಿರ ಕುಟುಂಬಸ್ಥರು ಆರಂಭಿಸಿದ್ದಾರೆ.
ಕಳೆದ ವರ್ಷವೇ ಆರಂಭಿಕ ಸಿದ್ಧತೆಗಳು ನಡೆದಿತ್ತಾದರೂ ಜಿಲ್ಲೆಯ ದುರಂತದಿಂದಾಗಿ ಇದನ್ನು ಮುಂದುವರಿಸಿರಲಿಲ್ಲ. ಇದೀಗ ಮುಂದಿನ ವರ್ಷದ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಉತ್ಸವ ಸಮಿತಿ ಅಧ್ಯಕ್ಷರಾಗಿ ಮುಕ್ಕಾಟಿರ ಮೋಟು ಉತ್ತಯ್ಯ, ಕಾರ್ಯಾಧ್ಯಕ್ಷರಾಗಿ ರೋಹಿತ್ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಬೆನ್ನಪೂಮಣಿ, ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಮಣ, ಖಜಾಂಚಿಯಾಗಿ ಅಪ್ಪಚ್ಚು, ಜಂಟಿ ಖಜಾಂಚಿಯಾಗಿ ರಿತೇಶ್ ಬಿದ್ದಪ್ಪ ಅವರುಗಳನ್ನು ಒಳಗೊಂಡ ಸಮಿತಿಯೊಂದಿಗೆ ಸಾಂಸ್ಕøತಿಕ ಸಮಿತಿ, ಮೈದಾನ ಸಮಿತಿ, ಆಹಾರ ಸಮಿತಿ, ಸ್ವಾಗತ ಸಮಿತಿ, ತಾಂತ್ರಿಕ ಸಮಿತಿಯಂತಹ ಪ್ರಮುಖ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಹರಿಹರ- ಬೆಳ್ಳೂರು ಗ್ರಾಮದಲ್ಲಿರುವ ಕುಟುಂಬದ ಕಾರೋಣ ತೆರೆಯಲ್ಲಿ ಪ್ರತಿ ತಿಂಗಳ ಎರಡನೆಯ ಬುಧವಾರದಂದು ಈ ಕುರಿತಾಗಿ ಸಭೆ ನಡೆಸಲಾಗುತ್ತಿದೆ. ಈಗಾಗಲೇ 8 ಸಭೆಗಳು ಜರುಗಿವೆ. ಹಣ ಕ್ರೋಢೀಕರಣ, ಪ್ರಾಯೋಜಕತ್ವದ ತಯಾರಿಗಳು ನಡೆಯುತ್ತಿವೆ. ತವರು ಮನೆ ಹುಡುಗಿಯರನ್ನೂ ಭೇಟಿ ಮಾಡಲಾಗಿದೆ. ಬೆಂಗಳೂರಿನಲ್ಲಿಯೂ ಈ ಕುರಿತಾದ ಸಭೆಯೊಂದನ್ನು ನಡೆಸಲಾಗಿದೆ. ಮುಂದಿನ ತಿಂಗಳು ಕೊಡವ ಹಾಕಿ ಅಕಾಡೆಮಿ ಅಂಪೈರ್ಸ್ ಅಸೋಸಿಯೇಷನ್, ಬಾಳುಗೋಡು ಸಮಾಜದ ಪ್ರಮುಖರೊಂದಿಗೆ ಜಂಟಿ ಸಭೆಯನ್ನು ನಡೆಸಲು ಉದ್ದೇಶಿಸ ಲಾಗಿದೆ ಎಂದು ಪದಾಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.
ಲೋಗೋ ಅನಾವರಣ
ಉತ್ಸವದ ಹಿನ್ನೆಲೆಯಲ್ಲಿ ಲೋಗೋ (ಲಾಂಛನ) ತಯಾರಿ ನಡೆಸಲಾಗಿದ್ದು, ಮುಂದಿನ ಅಕ್ಟೋಬರ್ ಅಂತ್ಯದಲ್ಲಿ ಹಲವಾರು ಅತಿಥಿಗಣ್ಯರ ಸಮ್ಮುಖದಲ್ಲಿ ಬಾಳುಗೋಡುವಿನಲ್ಲಿ ಲೋಗೋ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಉತ್ಸವ ಖಚಿತ
ಈ ಬಗ್ಗೆ ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಅಮ್ಮಣಿಚಂಡ ರವಿ ಅವರು ಪ್ರತಿಕ್ರಿಯಿಸಿದ್ದು, ಈ ಬಾರಿ ಹಾಕಿ ಉತ್ಸವ ಈ ಹಿಂದಿನ ವರ್ಷಗಳಂತೆ ಮುಂದುವರಿಯುವದು ಖಚಿತ, ಕುಟುಂಬಸ್ಥರು ಈ ಕುರಿತು ತಯಾರಿಯಲ್ಲಿರುವ ಕುರಿತು ತಿಳಿದುಬಂದಿದೆ. ಆದರೆ ಅಧಿಕೃತ ಚರ್ಚೆ ನಡೆದಿಲ್ಲ. ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಸಭೆ ನಡೆಸಲಾಗುವದು. ಅಲ್ಲದೆ ಕುಟುಂಬಸ್ಥರು ಕಳೆದ ವರ್ಷವೇ ಮೈದಾನದ ಅಭಿವೃದ್ಧಿಗೂ ಸಾಕಷ್ಟು ಹಣ ವ್ಯಯಿಸಿದ್ದಾರೆ ಎಂದು ಹೇಳಿದ್ದಾರೆ.
ತೀರ್ಪುಗಾರರ ಸಂಘದ ಹಾಗೂ ತಾಂತ್ರಿಕ ಸಮಿತಿ ಪ್ರಮುಖ ಬುಟ್ಟಿಯಂಡ ಚಂಗಪ್ಪ ಅವರು ಪ್ರತಿಕ್ರಿಯಿಸಿದ್ದು, ಕೆಲವು ಕಾರಣಗಳಿಂದ ತೀರ್ಪುಗಾರಿಕೆ ಕುರಿತಂತೆ, ತೀರ್ಪುಗಾರರು ಈಗಾಗಲೇ ತಾವು ಈ ಬಾರಿ ಇದಕ್ಕೆ ಮುಂದಾಗುವದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ಖಚಿತತೆಗೆ ಬರಬಹುದು ಎಂದು ಕಾದುನೋಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.