ವೀರಾಜಪೇಟೆ, ಸೆ. 23: ಕಾಕೋಟುಪರಂಬು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಅದ್ಯಕ್ಷೆ ಮೋಹಿನಿ ಅಧÀ್ಯಕ್ಷತೆಯಲ್ಲಿ ಕಾಕೋಟುಪರಂಬು ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಅಮ್ಮಂಡ ವಿವೇಕ್ ಹಾಗೂ ಕೋದಂಡ ಸುರಾ ಅಯ್ಯಪ್ಪ ಅಧ್ಯಕ್ಷರಿಗೆ ಸಭೆ ನಡೆಸಲು ಅರ್ಹತೆ ಇಲ್ಲ. ಅವರು ಇಲ್ಲ್ಲಿಯ ಮತದಾರರೆ ಅಲ್ಲ. ಅವರು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರಾಗಿದ್ದಾರೆ. ನಮ್ಮ ಕ್ಷೇತ್ರದ ಮತದಾರರಲ್ಲದವರು ಹೇಗೆ ಅಧ್ಯಕ್ಷರಾಗಿ ಮುಂದುವರೆಯತ್ತಾರೆ ಎಂದು ಪಿಡಿಓ ದೀಪ ಅವರನ್ನು ಪ್ರಶ್ನಿಸಿದಾಗ ಅಸಹಾಯಕರಾದ ಪಿಡಿಓ ತಾನು ಅಧಿಕಾರ ವಹಿಸಿಕೊಂಡು 10 ದಿನಗಳಾಗಿದೆ. ನನಗೂ ಕೂಡ ಇಂದೇ ತಿಳಿದಿರುವದು. ಅಧ್ಯಕ್ಷರೆ ಸಭೆಗೆ ಮಾಹಿತಿ ನೀಡಿ ಎಂದು ಹೇಳಿದರು.
ಅಧ್ಯಕ್ಷೆ ಮೋಹಿನಿ ವಿವರಣೆ ನೀಡಿ, ಚುನಾವಣೆ ಎದುರಿಸುವ ಸಂದರ್ಭ ನನ್ನ ಹೆಸರು ಇಲ್ಲಿನ ಮತದಾರರ ಪಟ್ಟಿಯಲ್ಲಿತ್ತು. ಹೆಸರಿನ ಪ್ರಾರಂಭಿಕದ ಅಕ್ಷರ ಬದಲಾವಣೆಯಾಗಿ ಡಿಲೀಟ್ ಆಗಿದೆ. ಎಂದು ಹೇಳಿದರು. ಅವರ ಸಮಾಜಾಯಿಷಿಕೆಯನ್ನು ಒಪ್ಪದ ಗ್ರಾಮಸ್ಥರು ಕೆದಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಸೇರ್ಪಡೆ ಗೊಂಡಿದ್ದೀರಾ; ನಮ್ಮಲ್ಲಿ ಆಧಾರ ಇದೆ ಎಂದು ಹೇಳಿದಾಗ ತಬ್ಬಿಬ್ಬಾದ ಅಧ್ಯಕ್ಷರು ಗಂಡನಿಗೆ ಕೆದಮುಳ್ಳೂರಿನಲ್ಲಿ ಜಾಗ ಇದೆ; ಅದಕ್ಕೆ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರು. ವಾದ - ವಿವಾದಗಳು ನಡೆಯಿತು. ಅದಕ್ಕೂ ಒಪ್ಪದ ಗ್ರಾಮಸ್ಥರು ಅಧಿಕಾರ ತ್ಯಜಿಸುವಂತೆ ಪಟ್ಟು ಹಿಡಿದರು. ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಅವರು ಮಧÀ್ಯ ಪ್ರವೇಶ ಮಾಡಿ ಅವರ ಅಧಿಕಾರವಧಿ ಇನ್ನು 6 ತಿಂಗಳು ಮಾತ್ರ ಇದೆ. ಒಂದು ಅವಕಾಶ ಕೊಡಿ ಎಂದು ಹೇಳಿದಾಗ ಅಧ್ಯಕ್ಷರು ಸಭೆಯ ಕ್ಷಮೆ ಯಾಚಿಸಿದರು.
ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ ಕಳೆದ ಬಾರಿ ಕಂದಾಯ ಇಲಾಖಾಧಿಕಾರಿಗಳು ಪ್ರವಾಹದಲ್ಲಿ ನಷ್ಟ ಆದವರಿಗೆ ಯಾರಿಗೂ ಪರಿಹಾರ ನೀಡಲಿಲ್ಲ, ಏನು ಹಾನಿ ಆಗದವರಿಗೆ ಪರಿಹಾರ ನೀಡಿದ್ದಾರೆ. ಈ ಬಾರಿ ಅಂತಹ ಪರಿಸ್ಥಿತಿ ಆಗಬಾರದು, ಖುದ್ದಾಗಿ ಪರಿಶೀಲನೆ ನಡೆಸಿ ನೈಜ ಫಲಾನುಭವಿಗಳನ್ನು ಗುರುತಿಸಿ ನೀಡಬೇಕು ಎಂದು ಹೇಳಿದರು,
ಉತ್ತರಿಸಿದ ಕಂದಾಯ ಅಧಿಕಾರಿ ಪಳಂಗಪ್ಪ ಕಳೆದ ಬಾರಿ ಕಂಪ್ಯೂಟರ್‍ನ ತಾಂತ್ರಿಕ ದೋಷದಿಂದ 9 ಗ್ರಾಮಗಳು ಬಿಟ್ಟು ಹೋಗಿತ್ತು; ಈ ಬಾರಿ ಅಂತಹ ಸಮಸ್ಯೆ ಬರುವದಿಲ್ಲ. ಈಗಾಗಲೆ ಪ್ರವಾಹದಲ್ಲಿ ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟಾದವರಿಗೆ 10 ಸಾವಿರ ರೂ.ಗಳನ್ನು ನೀಡಲಾಗಿದೆ. 14 ಮನೆಗಳ ವರದಿ ಸಿದ್ಧವಾಗಿದೆ. ಶೀಘ್ರದಲ್ಲಿಯೆ ಅವರಿಗೆ ನೀಡಲಾಗು ವದು. ಸರ್ಕಾರದ ಸುತ್ತೋಲೆಯಂತೆ ಮೊದಲು ಮನೆ ನಂತರ ಕೃಷಿ, ವಾಣಿಜ್ಯ ಬೆಳೆಗಳಿಗೆ ಪ್ರಾಮುಖ್ಯತೆ ನೀಡಲಾಗುವದು. ಈಗಾಗಲೇ 8 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಬಹುತೇಕ ಕಾಫಿಗೆ ಸಂಬಂಧಪಟ್ಟಿರು ವದಾಗಿರುವರಿಂದ ಕಾಫಿ ಮಂಡಳಿಗೆ ನೀಡಲಾಗುವದು. ಕಾವೇರಿ ನದಿ ತಟದಲ್ಲಿ ವಾಸಿಸುವ ಮನೆಗಳಿಗೆ ಪ್ರತಿ ವರ್ಷ ಪರಿಹಾರ ನೀಡುತ್ತಿರುವ ಬಗ್ಗೆ ಅಪಸ್ವರ ಬಂದಿರುವ ಹಿನೆÀ್ನಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಲಾಗುವದು ಎಂದು ಹೇಳಿದರು.
ಪಶುವೈದÀ್ಯಕೀಯ ಅಧಿಕಾರಿ ಡಾ. ಸುನಿಲ್ ಮಾಹಿತಿ ನೀಡಿ; ಪ್ರವಾಹ ಉಂಟಾದ ಸಂದರ್ಭ ಬೇತ್ರಿಯಲ್ಲಿ ಒಂದು ಹಸು ಮೃತಪಟ್ಟಿದೆ. ಮರೋಣೊತ್ತರ ಪರೀಕ್ಷೆ ನಡೆಸಲಾಗಿದೆ. ಪರಿಹಾರ ನೀಡಲು ಅರ್ಜಿ ಬಂದಿದೆ. ಎಂದು ಸಭೆಗೆ ತಿಳಿಸಿದಾಗ ರಾಬಿನ್ ದೇವಯ್ಯ ಸ್ಪಷ್ಟವಾದ ಮಾಹಿತಿ ನೀಡಿ ಎಂದು ವೈದ್ಯರನ್ನು ಆಗ್ರಹಿಸಿದರು. ವೈದ್ಯರು ಎಲ್ಲವನ್ನು ವಿವರಿಸುತ್ತಿದ್ದಾಗ ಗ್ರಾಮಸ್ಥರು ಅಲ್ಲಿ ಮೃತಪಟ್ಟಿದ್ದು ಹಸು ಅಲ್ಲ ಹೋರಿ ಎಂದು ಹೇಳಿದಾಗ ಸಭೆ ನಗೆಗಡಲಿಗೆ ತೇಲಿತು. ವಾಸ್ತವವಾಗಿ ಪ್ರವಾಹದಲ್ಲಿ ಯಾವದೆ ಜಾನುವಾರುಗಳಿಗೆ ಹಾನಿಯಾಗಿಲ್ಲ, ಅಧಿಕಾರಿಗಳು ಹಾನಿ ಆಗಿದೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದಾಗ ಮಧÀ್ಯ ಪ್ರವೇಶಿಸಿದ ಜಿ.ಪಂ. ಸದಸ್ಯ ಮಹೇಶ್ ಪರಿಹಾರಕ್ಕಾಗಿ ಬಂದ ಅರ್ಜಿಯನ್ನು ಪರಿಶೀಲನೆ ನಡೆಸಿ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.
ಕಳ್ಳಿರ ಪ್ರಕಾಶ್ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಲು ಬೆರಳು ಗುರುತನ್ನು ನೀಡಿದರೆ ಮಾತ್ರ ಪಡಿತರ ಸಿಗುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಜನರಿಗೆ ಮಾತ್ರ ಆಹಾರ ಸಾಮಗ್ರಿಗಳು ಸಿಗುತ್ತದೆ. ಕೂಲಿ ಕಾರ್ಮಿಕರು ಇಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ. ಅವರ ದಿನದ ಸಂಬಳವನ್ನು ಇಲಾಖೆಯಿಂದ ನೀಡಿ ಎಂದು ಹೇಳಿದಾಗ ಆಹಾರ ಶಿರಸ್ಥೆದಾರ್ ರಾಮಚಂದ್ರು ಮಾಹಿತಿ ನೀಡಿ ಸರ್ಕಾರ ಮಾಡಿರುವ ಕಾನೂನನ್ನು ನಾವು ಪಾಲಿಸಲೇಬೇಕು. ಕಳೆದ ಒಂದು ವಾರದಿಂದ ಸರ್ವರ್ ತೊಂದರೆ ಇದೆ. ಬಯೋಮೆಟ್ರಿಕ್ ಸಿಸ್ಟಮ್ ಬಂದಿರುವದರಿಂದ ಜನಸಾಮಾನ್ಯರು ಯಾವದೇ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬಹುದಾಗಿದೆ. ನಿಮಗೆ ಬೇಡ ಅಂದರೆ ಗ್ರಾಮ ಸಭೆಯಲ್ಲಿ ನಿರ್ಣಯ ಕ್ಯೆಗೊಂಡು ಅದರ ಪ್ರತಿಯನ್ನು ಕಳುಹಿಸಿಕೊಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡು ತ್ತೇನೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಬೇಕಾದವರು ಆನ್‍ಲ್ಯೆನ್ ಮೂಲಕ ಅರ್ಜಿ ಹಾಕಿಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ತಾ.ಪಂ ಸದಸ್ಯೆ ಆಲತಂಡ ಸೀತಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಮ್ಮ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.