ಕೂಡಿಗೆ, ಸೆ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ 11.2 ಎಕರೆ ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಸಂಸ್ಕರಣ ಘಟಕದ ಕಾಮಗಾರಿ ಇದೀಗ ಶೇ. 90 ರಷ್ಟು ಮುಗಿದಿದೆ. ಆದರೆ, ಮೂರು ವರ್ಷಗಳೇ ಕಳೆದರೂ ನೆನೆಗುದಿಗೆ ಬಿದ್ದಿದೆ.

ರಾಜ್ಯ ಸರ್ಕಾರದ ಈ ಯೋಜನೆ ರೂ. 5 ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನ ಇಲಾಖೆಯಿಂದ ರೂ. 3 ಕೋಟಿ ಬಿಡುಗಡೆಯಾಗಿದ್ದು, ಬಿಡುಗಡೆಯ ಹಣದಲ್ಲಿ ಮೇಕೆ ಹಾಲು ಉತ್ಪಾದನಾ ಘಟಕದ ಕಟ್ಟಡಗಳು ಇದೀಗ ಶೇ. 90 ಭಾಗದಷ್ಟು ಪೂರ್ಣಗೊಂಡಿವೆ. ನಿರ್ಮಿತಿ ಕೇಂದ್ರದ ವತಿಯಿಂದ ಕಟ್ಟಡ ಕಾಮಗಾರಿ ಮುಗಿದು, ಪಶುಪಾಲನಾ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.

ಆದರೆ ಘಟಕಕ್ಕೆ ಬೇಕಾಗುವ ಯಾಂತ್ರೋಪಕರಣ ಮತ್ತು ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥಿಲೀಕರಣ ಕೇಂದ್ರ ಹಾಗೂ ಮೇಕೆಗೆ ಹುಲ್ಲು ಸಂಗ್ರಹಣ ಘಟಕ, ಮೇಕೆ ಸಾಕಾಣಿಕ ಕೇಂದ್ರಕ್ಕೆ ಜೋಡಣೆಯ ಕಾರ್ಯವು ಪಶುಪಾಲನಾ ಇಲಾಖೆಯ ವತಿಯಿಂದ ಆಗಬೇಕಿದೆ. ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ಈ ಪ್ರದೇಶದ ವ್ಯಾಪ್ತಿಯೊಳಗೆ 50 ಜಾತಿಯ ಹೈಬ್ರಿಡ್ ಹುಲ್ಲಿನ ತಳಿಗಳನ್ನು ಬೆಳೆಸುವ ಯೋಜನೆಯಿದೆ. ಅಲ್ಲದೆ ರಾಜ್ಯದಲ್ಲಿನ ಬರಗಾಲಪೀಡಿತ ಪ್ರದೇಶಗಳಿಗೆ ಹುಲ್ಲನ್ನು ಕಳಿಸುವ ಯೋಜನೆಯು ಇದಾಗಿದೆ. ಇದರ ಜೊತೆಯಲ್ಲಿ ಮಲೆನಾಡು ಗಿಡ್ಡ ರಾಸುಗಳು ಮತ್ತು ಸ್ಥಳೀಯ ಹಸುಗಳನ್ನು ಪ್ರೋತ್ಸಾಹಿಸುವ ಯೋಜನೆಯು ಇದಾಗಿದೆ. ಆದರೆ ಈವರೆಗೂ ಯಾವದೇ ಪ್ರಗತಿ ಕಾಣದೆ, ರಾಜ್ಯ ಸರ್ಕಾರದ ಮೇಕೆ ಹಾಲು ಉತ್ಪಾದನಾ ಕೇಂದ್ರದ ಪ್ರಥಮ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.

- ಕೆ.ಕೆ. ನಾಗರಾಜಶೆಟ್ಟಿ