ಸುಂಟಿಕೊಪ್ಪ, ಸೆ. 16: ಕೊಡಗಿನ ನೈಜ ಸಮಸ್ಯೆಗಳನ್ನು ವಿಧಾನಸೌಧಕ್ಕೆ ಮುಟ್ಟಿಸಲು ಜನಪ್ರತಿನಿಧಿಗಳೊಂದಿಗೆ ಎಲ್ಲ ಹೋರಾಟ ಸಮಿತಿಯವರು ಒಂದೇ ವೇದಿಕೆಗೆ ಬರಬೇಕಾಗಿದೆ. ಇದಕ್ಕೆ ಜನರು ಕೈಜೋಡಿಸಬೇಕು ಎಂದು ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದರು.

ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರಭವನದಲ್ಲಿ ಸುಂಟಿಕೊಪ್ಪ ಹೋಬಳಿ ರೈತ ಸಮುದಾಯ ಬಳಗ ಮತ್ತು ಕಾಫಿಕೃಷಿ ಉತ್ಪಾದಕರ ಕೂಟದ ವತಿಯಿಂದ ಏರ್ಪಡಿಸಿದ್ದ ಕೃಷಿ ಉತ್ಪಾದನೆಗಾಗಿ ತಾತ್ಕಾಲಿಕವಾಗಿ ಬಳಸಿದ ವಿದ್ಯುತ್ ಸಂಪರ್ಕದ ನೀರಾವರಿ ವಿದ್ಯುತ್‍ಶುಲ್ಕವನ್ನು ಬಲತ್ಕಾರವಾಗಿ ಚೆಸ್ಕಾಂ ವಸೂಲಿ ಮಾಡುವದಲ್ಲದೆ ನೀರಾವರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವದನ್ನು ಪ್ರತಿಭಟಿಸುವ ಸಲುವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಂಡ್ಯ, ಹಾಸನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆಗೆ ವಿದ್ಯುತ್ ಶುಲ್ಕವನ್ನು ಕೈಬಿಟ್ಟಿರುವ ಸರಕಾರ ಕೊಡಗಿಗೆ ಮಾತ್ರ ಮಲತಾಯಿ ಧೋರಣೆ ತಾಳಿದೆ. ಕಳೆದ 2 ವರ್ಷಗಳಿಂದ ಅತಿವೃಷ್ಟಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ, ಕರಿಮೆಣಸು ಫಸಲು ಕೈಕೊಟ್ಟಿದೆ. ಮತ್ತೊಂದೆಡೆ ದರ ಕುಸಿತದಿಂದ ರೈತರ ಬದುಕು ಅತಂತ್ರವಾಗಿದೆ. ಈಗಿದ್ದರೂ ಸರಕಾರ ಕೊಡಗಿನ ಕಾಫಿ ಬೆಳೆಗಾರರು 3 ತಿಂಗಳ ಕಾಲ ಬಳಸುವ ಪಂಪ್‍ಸೆಟ್‍ನ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವದು ಸರಿಯಲ್ಲ ಸದಸ್ಯರು ಇಬ್ಬರು ವಿಧಾನಪರಿಷತ್ ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಲಿದ್ದು ಬೆಳೆಗಾರರು ಹೋರಾಟ ಮಾಡಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ ಕೊಡಗಿನ ಕೃಷಿಕರು ಲಕ್ಷಾಂತರ ರೂ ವ್ಯಯಮಾಡಿ ಕೊಳವೆಬಾವಿ ತೊಡಿಸಿ ನೀರನ್ನು ಬಳಕೆ ಮಾಡುತ್ತಿದ್ದಾರೆ. ಚೆಸ್ಕಾಂ ಇದೀಗ ಶುಲ್ಕ ಪಾವತಿಸಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುವದು ಸರಿಯಲ್ಲ ಚೆಸ್ಕಾಂ ಲಾಭದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕೊಡಗಿನ ಬೆಳೆಗಾರರಿಗೆ ಕನಿಷ್ಟ ಮೊತ್ತ ಏಕೆ ನಿಗದಿಪಡಿಸಿದೆ. ಬೇರೆ ಜಿಲ್ಲೆಯಲ್ಲಿ 3 ಬೆಳೆ ತೆಗೆಯುವ ರೈತರಿಗೆ ವಿನಾಯಿತಿ, ಕೊಡಗಿನ ಬೆಳೆಗಾರರಿಗೆ ಸರಕಾರ ಏಕೆ ಬರೆ ಹಾಕುತ್ತಿದೆ. ಈ ಬಗ್ಗೆ ಶಾಸಕರು ವಿಧಾನಮಂಡಲದಲ್ಲಿ ಪ್ರಸ್ತಾಪಿಸಿ ಬೆಳೆಗಾರಿಗೆ ನ್ಯಾಯಕೊಡಿಸಬೇಕು, ಬೆಳೆಗಾರರು ಒಗ್ಗೂಡಿ ಹೋರಾಟ ಮಾಡಬೇಕು. ಕಾನೂನಿನ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಬೆಳೆಗಾರ ಪಿ. ಕೆ. ಮುತ್ತಣ್ಣ ವಹಿಸಿದ್ದರು.

ಜಿ. ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಸಿ. ಪೊನ್ನಪ್ಪ, ಬೆಳೆಗಾರ ಬೆನ್‍ಗಣಪತಿ, ಪುರೋಷತ್ತಮ್ ರೈ, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎ.ಕರುಂಬಯ್ಯ ಉಪಸ್ಥಿತರಿದ್ದರು. ಹಿರಿಯರಾದ ಎಂ.ಎ.ವಸಂತ ಮನವಿ ಪತ್ರ ವಾಚಿಸಿ ಜನ ಪ್ರತಿನಿಧಿಗಳಿಗೆ ನೀಡಿದರು. ಕುಂಜಿಲನ ಎಸ್. ಮಂಜುನಾಥ್ ಸ್ವಾಗತಿಸಿದರು.