ಗೋಣಿಕೊಪ್ಪಲು, ಸೆ. 17: ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಪ್ರೀತಿಯಿಂದ ಮಾತನಾಡಿ ಸೌಹಾರ್ದ ಯುತವಾಗಿ ನಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಸೂಚನೆ ನೀಡಿದರು.ಇದೇ ಮೊದಲ ಬಾರಿಗೆ ಗೋಣಿಕೊಪ್ಪ,ಕುಟ್ಟ,ಚನ್ನಯ್ಯನಕೋಟೆ ಹಾಗೂ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಭಾಗದ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ಎರಡು ವೈದ್ಯರಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗನೇ ವೈದ್ಯರನ್ನು ನೇಮಿಸಬೇಕು, ಇಲ್ಲಿರುವ ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ಜನಪ್ರತಿನಿಧಿಗಳಿಗೆ ಕನಿಷ್ಟ ಗೌರವ ನೀಡುತ್ತಿಲ್ಲ. ಅಂತಹವರ ಮೇಲೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಜಿಲ್ಲಾ ವೈದ್ಯಾಧಿಕಾರಿ ಡಾ. ಮೋಹನ್ ಅವರಿಗೆ ತಿಳಿಸಿದರು. ಇವರ ಮಾತಿಗೆ ಧ್ವನಿ ಗೂಡಿಸಿದ ಬಾಳೆಲೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ ಕಾನೂರು ಆಸ್ಪತ್ರೆ ಯಲ್ಲಿರುವ ಕೆಲವು ಶುಶ್ರೂಶಕಿಯರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸ್ಥಳೀಯರು ಆರೋಗ್ಯ ತಪಾಸಣೆಗೆ ತೆರಳಿದ ಸಂದರ್ಭ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಆದ್ದರಿಂದ ಇಲ್ಲಿರುವ ಶುಶ್ರೂಕಿಯರನ್ನು ಬೇರೆಡೆಗೆ ವರ್ಗಾಹಿಸುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.(ಮೊದಲ ಪುಟದಿಂದ) ಇವರ ಮಾತಿಗೆ ಉತ್ತರಿಸಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಮೋಹನ್ ಈ ಬಗ್ಗೆ ಕ್ರಮ ವಹಿಸಲು ತಾಲೂಕು ವೈದ್ಯಾಧಿಕಾರಿ ಗಳಾದ ಡಾ. ಯತಿರಾಜ್ ಅವರಿಗೆ ಸೂಚನೆ ನೀಡಿದ್ದೇನೆ. ಕೂಡಲೇ ಕ್ರಮಕೈಗೊಳ್ಳುವ ದಾಗಿ ಭರವಸೆ ನೀಡಿದರು.

ಕೊಡಗಿಗೆ ವೈದ್ಯರುಗಳು ಆಗಮಿಸದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಸೀಮಿತಗೊಂಡಂತೆ ವೇತನದಲ್ಲಿ ಶೇ. 30 ರಷ್ಟು ಹೆಚ್ಚಳ ಮಾಡುವ ಪ್ರಸ್ತಾವವನ್ನು ಮುಂದಿನ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವದು. ಆ ಮೂಲಕ ಜಿಲ್ಲೆಗೆ ವೈದ್ಯರು ಆಗಮಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವದಾಗಿ ಕಿರಣ್ ಕಾರ್ಯಪ್ಪ ಸಭೆಗೆ ತಿಳಿಸಿದರು.

ನೂತನವಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಜವಾಬ್ದಾರಿ ವಹಿಸಿಕೊಂಡಿರುವ ಡಾ. ಗ್ರೀಷ್ಮ ಮಾತನಾಡಿ ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿರುವ 12 ಲಕ್ಷ ಅನುದಾನಕ್ಕೆ ರಕ್ಷಾ ಸಮಿತಿಯ ಅನುಮೋದನೆಯೊಂದಿಗೆ ಆಯ್ದ ಆಸ್ಪತ್ರೆಯ ಕಾಮಗಾರಿಗಳ ಕೆಲಸವನ್ನು ನಿರ್ವಹಿಸಬೇಕಾಗಿದ್ದು, ಅನುಮೋದನೆ ನೀಡುವಂತೆ ಕೋರಿದರು. ಯಾವದೇ ಲೋಪ ಆಗದಂತೆ ಎಚ್ಚರ ವಹಿಸಿ ಅಗತ್ಯ ಕೆಲಸಗಳನ್ನು ನಿರ್ವಹಿಸುವಂತೆ ಸಭೆಯ ಅಧ್ಯಕ್ಷರು ಅನುಮತಿ ನೀಡಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಕೆಲವು ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಶಿಫಾರಸ್ಸು ಮಾಡುವ ಆರೋಪಗಳು ಕೇಳಿ ಬಂದಿವೆ. ಇದರ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಜಿಲ್ಲಾ ವೈದ್ಯಾಧಿಕಾರಿಗಳ ಮುಂದೆ ಪ್ರಸ್ತಾಪಿಸಿ ದರು. ಈ ಸಂದರ್ಭ ಮಾಹಿತಿ ಒದಗಿಸಿದ ಆಡಳಿತ ಆಧಿಕಾರಿ ಡಾ. ಗ್ರೀಷ್ಮ ಇಂತಹ ಪ್ರಸಂಗಗಳು ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಯ ಸಿಬ್ಬಂದಿಗಳಿಗೆ ಸಭೆ ನಡೆಸಿ ಸೂಚನೆ ನೀಡಲಾಗುವದು ಎಂದರು. ‘ಡಿ’ ಗ್ರೂಪ್ ನೌಕರರು ಸಮವಸ್ತ್ರ ಧರಿಸದೆ ಸೇವೆ ಸಲ್ಲಿಸುತ್ತಿರುವ ಬಗ್ಗೆ ಪ್ರಸ್ತಾಪಿಸಲಾಯಿತು. ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಗುತ್ತಿಗೆದಾರ ಈ ಬಗ್ಗೆ ಕ್ರಮ ವಹಿಸಿಲ್ಲ ಹಲವು ಬಾರಿ ಮನವಿ ಮಾಡಲಾಗಿದೆ ಅಂತಿಮವಾಗಿ ಪತ್ರ ಬರೆದು ಕೂಡಲೇ ಸಮವಸ್ತ್ರ ವಿತರಿಸಲು ಸೂಚನೆ ನೀಡುವದಾಗಿ ಹೇಳಿದರು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಆಗಮಿಸುತ್ತಿರುವದರಿಂದ ಲಭ್ಯವಿರುವ ಎರಡು ವೈದ್ಯರು ಅನಿವಾರ್ಯವಾಗಿ ಆಪರೇಷನ್ ಥಿಯೇಟರ್‍ನಲ್ಲಿ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ಹೊರರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವದಿಲ್ಲ. ಇಂತಹ ವೇಳೆಯಲ್ಲಿ ಸ್ವಲ್ಪ ಮಟ್ಟಿಗೆ ಚಿಕಿತ್ಸೆ ಕೊಡುವಲ್ಲಿ ವಿಳಂಬವಾಗುತ್ತದೆ ಇದನ್ನು ಹೊರತುಪಡಿಸಿದರೆ ಸಕಾಲದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಗ್ರೀಷ್ಮ ಸಭೆಗೆ ಮಾಹಿತಿ ನೀಡಿದರು.

ಇನ್ನು ಮುಂದೆ ಎರಡು ತಿಂಗಳಿಗೊಮ್ಮೆ ವೀರಾಜಪೇಟೆ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಾದ ಸಿದ್ದಾಪುರ, ಪಾಲಿಬೆಟ್ಟ, ಕುಟ್ಟ, ಗೋಣಿಕೊಪ್ಪ ಸಂಬಂಧಪಟ್ಟಂತೆ ಗೋಣಿಕೊಪ್ಪಲು ವಿನಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆ ಕರೆಯಲಾಗುವದು ಸಭೆಗೆ ಆಯಾಯ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು, ತಾಲೂಕು ಪಂಚಾಯಿತಿ ಜನಪ್ರತಿನಿಧಿಗಳು, ಭಾಗವಹಿಸಲಿದ್ದಾರೆ. ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಸಭೆ ನಡೆಸಲು ಮೊದಲೇ ದಿನಾಂಕ ನಿಗದಿಗೊಳಿಸುವಂತೆ ಡಿಹೆಚ್‍ಒ ಮೋಹನ್ ಅವರಿಗೆ ಅಧ್ಯಕ್ಷ ಕಿರಣ್ ಕಾರ್ಯಪ್ಪ ನಿರ್ದೇಶನ ನೀಡಿದರು. ಇನ್ನು ಮುಂದೆ ನಡೆಯುವ ಸಭೆಗೆ ಖುದ್ದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿರುವಂತೆ ಸೂಚನೆ ನೀಡಿದರು.

ಸ್ಥಳೀಯ ವೈದ್ಯಾಧಿಕಾರಿಗಳ, ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ಆಸ್ಪತ್ರೆಯ ಕಾಮಗಾರಿಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಯಾವದೇ ಗುತ್ತಿಗೆದಾರ ಕೆಲಸ ನಿರ್ವಹಿಸಿದರೂ ಸ್ಥಳೀಯ ವೈದ್ಯರಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಅನುಮತಿ ಪಡೆದು ಕೆಲಸ ನಿರ್ವಹಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಆಸ್ಪತ್ರೆಯ ಶುಚಿತ್ವದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ,ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಕುಟ್ಟ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಸಭೆಯ ಗಮನಕ್ಕೆ ತಂದರು. ಆ್ಯಂಬುಲೆನ್ಸ್ ಚಾಲಿಸುವ ಚಾಲಕರು ರೋಗಿಗಳು ತಿಳಿಸುವ ಆಸ್ಪತ್ರೆಗೆ ಕರೆದೊಯ್ಯಬೇಕು. ತಮಗೆ ಇಷ್ಟಬಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯದಂತೆ, ರೋಗಿಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವಂತೆ ಚಾಲಕರಿಗೆ ಡಿಹೆಚ್‍ಒ ಮೋಹನ್ ಸೂಚನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಸ್ಮಿತ ಪ್ರಕಾಶ್ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಾಹಣಾಧಿ ಕಾರಿ ಷಣ್ಮುಗಂ ಹಾಜರಿದ್ದರು. ವೈದ್ಯಾಧಿಕಾರಿಗಳಾದ ಡಾ. ಸುರೇಶ್ ಸೇರಿದಂತೆ ಚನ್ನಯ್ಯನಕೋಟೆ ಜಿ.ಪಂ. ಸದಸ್ಯೆ ಲೀಲಾವತಿ, ಪೊನ್ನಂಪೇಟೆ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

-ಹೆಚ್.ಕೆ. ಜಗದೀಶ್