ನವದೆಹಲಿ, ಸೆ. 17: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಅನರ್ಹ ಶಾಸಕರು ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ.ಅರ್ಜಿ ಸಲ್ಲಿಕೆಯಾಗಿ ಹಲವು ದಿನಗಳು ಕಳೆದಿವೆ. ಆದ್ದರಿಂದ ಇಂದೇ ವಿಚಾರಣೆ ನಡೆಸುವಂತೆ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಕರ್ನಾಟಕ ರಾಜ್ಯದವರೇ ಆಗಿರುವ ತಾವು ಈ ಪೀಠದಲ್ಲಿ ಇರುವದು ಸರಿಯಲ್ಲ ಎಂದು ಪೀಠದಲ್ಲಿದ್ದ ಶಾಂತನಗೌಡರ್ ಹೇಳಿದರು. ಆದರೆ ಇದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹಾಗೂ ಕೆಪಿಸಿಸಿ ಪರ ವಕೀಲರು ಹೇಳಿದರು. ಆದರೆ ಶಾಂತನಗೌಡರ್ ಪೀಠದಿಂದ ಹಿಂದೆ ಸರಿದರು ಎಂದು ತಿಳಿದುಬಂದಿದೆ.ಇದರಿಂದ ಪೀಠ ಮರು ರಚನೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಪೀಠದಲ್ಲಿ ನ್ಯಾಯ ಮೂರ್ತಿಗಳಾದ ಎನ್.ವಿ.ರಮನ್, ಮೋಹನ್ ಶಾಂತನಗೌಡರ್ ಮತ್ತು ಅಜಯ್ ರಸ್ತೋಗಿ ಇದ್ದರು. ಇದೀಗ ನ್ಯಾಯಮೂರ್ತಿ ಮೋಹನ್ ಅವರು ಹಿಂದೆ ಸರಿದ ಪರಿಣಾಮ ಮತ್ತೊಬ್ಬರನ್ನು ನೇಮಕ ಮಾಡಿ ಮರುಪೀಠ ರಚನೆಯಾಗಬೇಕಾಗಿದೆ.